ಭಾರತ ಹಾಗೂ ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುತ್ತಿದ್ದು, ಈ ಸರಣಿ ಗೆಲ್ಲುವುದು ಟೀಮ್ ಇಂಡಿಯಾಕ್ಕೆ ಮಹತ್ವದಾಗಿದೆ. ಸೆಪ್ಟಂಬರ್ 19 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಎಲ್ಲ ಅಭಿಮಾನಿಗಳ ಕಣ್ಣು ಟೀಮ್ ಇಂಡಿಯಾದ ಆ ಒಬ್ಬ ಪ್ಲೇಯರ್ ಮೇಲೆ ನೆಟ್ಟಿದೆ.
ಬಾಂಗ್ಲಾದೇಶದ ವಿರುದ್ಧ ಸರಣಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾ ವಿರುದ್ಧವೂ ಟೀಮ್ ಇಂಡಿಯಾದ ಮೂವರು ಆಟಗಾರರು ದ್ವಿಶತಕ ಸಾಧನೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಕನ್ನಡಿಗ ಅನ್ನುವುದು ವಿಶೇಷ. ಹಾಗಿದ್ದರೆ ಬಾಂಗ್ಲಾ ವಿರುದ್ಧ ದ್ವಿಶತಕ ಬಾರಿಸಿದ ಆಟಗಾರರ ಪಟ್ಟಿ ಇಲ್ಲಿದೆ.

ಬಾಂಗ್ಲಾದೇಶದ ವಿರುದ್ಧ ಮೊದಲ ದ್ವಿಶತಕ ಬಾರಿಸಿದ ಹೆಗ್ಗಳಿಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇವರು 2004ರಲ್ಲಿ ನಡೆದ ಪಂದ್ಯದಲ್ಲಿ 248 ರನ್‌ಗಳ ಇನಿಂಗ್ಸ್ ಕಟ್ಟಿದ್ದರು. ಈ ಪಂದ್ಯದಲ್ಲಿ ಭಾರತ ತಂಡದ ಪರ ಸಚಿನ್ ತೆಂಡೂಲ್ಕರ್ ದ್ವಿಶತಕ ಹಾಗೂ ಜಹೀರ್ ಖಾನ್ ಅರ್ಧಶತಕ ಬಾರಿಸಿದ್ದರು. ಜಹೀರ್ 75 ರನ್ ಗಳಿಸಿದ್ದರು.
ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು ಏಳು ಬಾರಿ ದ್ವಿಶತಕದ ಸಾಧನೆ ಮಾಡಿದ್ದಾರೆ. ಇಂಹತದ್ದೇ ಸಾಧನೆಯನ್ನು ವಿರಾಟ್ 2017ರಲ್ಲಿ ಬಾಂಗ್ಲಾ ವಿರುದ್ಧವೂ ಮಾಡಿದ್ದರು.
ಹೈದರಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಟೀಮ್ ಇಂಡಿಯಾ ಪರ ಕೊಹ್ಲಿ 246 ಎಸೆತಗಳಲ್ಲಿ 24 ಬೌಂಡರಿಗಳ ನೆರವಿನಿಂದ 204 ರನ್ ಗಳಿಸಿದ್ದರು. ಆ ವೇಳೆ ಟೀಂ ಇಂಡಿಯಾ ನಾಯಕನೂ ಆಗಿದ್ದರು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೂ ವಿರಾಟ್ ಪಾತ್ರರಾಗಿದ್ದಾರೆ. ಈ ಪಂದ್ಯವನ್ನು ಭಾರತ 208 ರನ್‌ಗಳಿಂದ ಗೆದ್ದು ಕೊಂಡಿತ್ತು.

ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೂ ಸಲ್ಲುತ್ತದೆ. ಇವರು 2019ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ 330 ಎಸೆತಗಳಲ್ಲಿ 28 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ 243 ರನ್ ಗಳಿಸಿದ್ದರು.
ಈ ಪಂದ್ಯದಲ್ಲಿ ಅಜಿಂಕ್ಯ (86 ರನ್), ಚೇತೇಶ್ವರ ಪೂಜಾರ (54 ರನ್) ಮತ್ತು ರವೀಂದ್ರ ಜಡೇಜಾ (60 ರನ್) ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಈ ಸ್ಟಾರ್ ಆಟಗಾರರ ಭರ್ಜರಿ ಆಟದ ನೆರವಿನಿಂದ ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 130 ರನ್‌ಗಳಿಂದ ಗೆದ್ದುಕೊಂಡಿತು.

ಮುಂಬರುವ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಯಾವ ಬ್ಯಾಟರ್ ಮೂರಂಕಿ ಮೊತ್ತ ಮುಟ್ಟುತ್ತಾರೆ ಕಾದುನೋಡಬೇಕಿದೆ.