ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಹಾಫ್ ವೇ ಮಾರ್ಕ್ ತಲುಪುತ್ತಿದೆ. ಈ ಹಂತದಲ್ಲಿ ಹಲವು ತಂಡಗಳು ಏಳು ಪಂದ್ಯಗಳನ್ನು ಆಡಿವೆ. ಈ ವೇಳೆ ತಂಡಗಳ ಸ್ಟಾರ್ ಆಟಗಾರರು ತಮ್ಮ ಸೊಗಸಾದ ಆಟದಿಂದ ಅಭಿಮಾನಿಗಳ ಮನ ಗೆದ್ದಿದ್ದರು. ಇನ್ನು ತಮ್ಮ ಶಿಸ್ತು ಬದ್ಧ ಆಟದಿಂದ ಐಪಿಎಲ್‌ನಲ್ಲಿ ನೀಡುವ ಹಲವು ಪ್ರಶಸ್ತಿಗಳತ್ತ ಚಿತ್ತ ನೆಟ್ಟಿದ್ದಾರೆ. ಐಪಿಎಲ್ ಟ್ರೋಫಿ ಬಿಟ್ಟರೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುವ ಪ್ರಶಸ್ತಿಗಳಲ್ಲಿ ಆರೆಂಜ್ ಕ್ಯಾಪ್ ಪ್ರಶಸ್ತಿ ಸಹ. ಈ ಪ್ರಶಸ್ತಿಗಾಗಿ ಈಗಾಗಲೇ ಭಾರೀ ಪೈಪೋಟಿ ನಡೆದಿದೆ. ಈ ಬಾರಿಯ ಐಪಿಎಲ್‌ನಲ್ಲಿ ಯುವ ಆಟಗಾರರು ಹಾಗೂ ಅನುಭವಿ ಆಟಗಾರರು ತಮ್ಮ ಛಾಪು ಮೂಡಿಸಿದ್ದಾರೆ. ಹಾಗಿದ್ದಾರೆ, ಈ ಬಾರಿಯ ಟಾಪ್ ರನ್ ಬಾರಿಸಿದ ಐದು ಆಟಗಾರರ ಪಟ್ಟಿ ಇಲ್ಲಿದೆ.
ಐಪಿಎಲ್ ಆರಂಭವಾಗುವುದಕ್ಕೂ ಮುನ್ನ ಆರೆಂಜ್ ಕ್ಯಾಪ್ ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದ್ದವು. ಇದಕ್ಕೆ ಪೂರಕವಾಗಿ ಅಭಿಮಾನಿಗಳು ಹಲವು ಹೆಸರಗಳನ್ನು ಹೇಳುತ್ತಿದ್ದರೆ. ಇದರಲ್ಲಿ ಹಲವು ಸ್ಟಾರ್ ಆಟಗಾರರು ವೈಫಲ್ಯ ಅನುಭವಿಸಿದರೆ, ಇನ್ನು ಹಲವು ಆಟಗಾರರು ಅಭಿಮಾನಿಗಳ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಎಲ್‌ಎಸ್‌ಜಿ ತಂಡದ ನಿಕೋಲಸ್ ಪೂರನ್ ಅವರ ಹೆಸರು ಕಾಣಿಸಿಕೊಳ್ಳುತ್ತದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಮಧ್ಯಮ ಕ್ರಮಾಂಕದ ಆಟಗಾರ ನಿಕೋಲಸ್ ಪೂರನ್ ತಮ್ಮ ಆರ್ಭಟದ ಆಟದಿಂದಲೇ ಎಲ್ಲರ ಚಿತ್ತ ಕದ್ದಿದ್ದಾರೆ. ಇವರು ಸಿಕ್ಸರ್ ಬಾರಿಸುವ ಧಾಟಿಯನ್ನು ಕಂಡು ಅಭಿಮಾನಿಗಳು ಮನಸೋತಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಮುಂದೆ ನಿಂತು ಮೇಲೆತ್ತುವ ಇವರ ಕ್ಷಮತೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ವೇಗದ ಬೌಲರ್‌ಗಳೇ ಆಗಿರಲಿ, ಸ್ಪಿನ್ ಬೌಲರ್‌ಗಳೇ ಆಗಿರಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿಕೋಲಸ್ ಆಕ್ರಮಣಕಾರಿ ಆಟವನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಇವರ ತಲೆಯ ಮೇಲೆ ಆರೆಂಜ್ ಕ್ಯಾಪ್ ಇದೆ.
ನಿಕೋಲಸ್ ಪೂರನ್ ಆಡಿದ 7 ಪಂದ್ಯಗಳಲ್ಲಿ 59.50ರ ಸರಾಸರಿಲ್ಲಿ 357 ರನ್ ಸಿಡಿಸಿದ್ದಾರೆ. ಈ ವೇಳೆ 4 ಅರ್ಧಶತಕ ಬಾರಿಸಿದ್ದಾರೆ. ಈ ಲೀಗ್‌ನಲ್ಲಿ ಅಜೇಯ 87 ರನ್ ಬಾರಿಸಿದ್ದು ದೊಡ್ಡ ಸ್ಕೋರ್ ಆಗಿದೆ. ಇನ್ನು ಇವರ ಸ್ಟ್ರೈಕ್ ರೇಟ್ ಅಮೋಘ. ಇವರು ಈ ಲೀಗ್‌ನಲ್ಲಿ ಈಗಾಗಲೇ 28 ಬೌಂಡರಿ, 31 ಸಿಕ್ಸರ್ ಸಿಡಿಸಿದ್ದಾರೆ. ಇವರು ಬಾರಿಸಿದ 357 ರನ್‌ಗಳಲ್ಲಿ 298 ರನ್‌ಗಳನ್ನು ಬೌಂಡರಿ ಸಿಕ್ಸರ್‌ಗಳಿಂದಲೇ ಬಾರಿಸಿ ಅಬ್ಬರಿಸಿದ್ದಾರೆ.

18ನೇ ಆವೃತ್ತಿಯಲ್ಲಿ ಎಲ್ಲರು ತಮ್ಮತ್ತ ನೋಡುವಂತೆ ಬ್ಯಾಟರ್‌ಗಳಲ್ಲಿ ಬಿ ಸಾಯಿ ಸುದರ್ಶನ್ ಸಹ ಒಬ್ಬರು. ತಮಿಳುನಾಡಿನ ಈ ಎಡಗೈ ಬ್ಯಾಟರ್ ಈಗ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್‌ಗೆ ಆಧಾರ ಸ್ಥಂಭ. ಇವರು ಆರಂಭಿಕರಾಗಿ ಇನಿಂಗ್ಸ್ ಆರಂಭಿಸಿ ತಂಡ ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ನೆರವಾಗಬಲ್ಲ ಆಟಗಾರ. ಇವರ ಆಟವನ್ನು ಕಂಡು ಹಲವು ಮಾಜಿ ಆಟಗಾರರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇವರು ನಿಕೋಲಸ್ ಪೂರನ್‌ಗೆ ತೀವ್ರ ಪೈಪೋಟಿ ನೀಡುತ್ತಿರುವ ಆಟಗಾರ.
ಸಾಯಿ ಸುದರ್ಶನ್ ಆಡಿರುವ 6 ಪಂದ್ಯಗಳಲ್ಲಿ 217 ಎಸೆತಗಳನ್ನು ಎದುರಿಸಿ 329 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 54.83 ಆಗಿದೆ. ಇವರ ಸ್ಟ್ರೈಕ್ ರೇಟ್ 151ಕ್ಕಿಂತ ಹೆಚ್ಚಿದೆ. ಈ ಲೀಗ್‌ನಲ್ಲಿ ಈಗಾಗಲೇ ಇವರು 4 ಅರ್ಧಶತಕ ಸಿಡಿಸಿ, ಭರವಸೆ ಮೂಡಿಸಿದ್ದಾರೆ. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 31 ಬೌಂಡರಿ, 13 ಬೌಂಡರಿಗಳು ಸೇರಿವೆ. ಇವರು ನಿಕೋಲಸ್ ಪೂರನ್ ಅವರಿಗಿಂತ 28 ರನ್ ಹಿಂದೆ ಇದ್ದಾರೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಎಲ್‌ಎಸ್‌ಜಿ ತಂಡದ ಆಟಗಾರ ಎಂದರೆ ಮಿಚೆಲ್ ಮಾರ್ಷ. ಇವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ಇವರು ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ನಿಸ್ಸಿಮರು. ಇವರು ಸಹ ಆರೆಂಜ್ ಕ್ಯಾಪ್ ಮೇಲೆ ಒಂದು ಕಣ್ಣು ನೆಟ್ಟಿದ್ದಾರೆ. ಇವರು ಲೀಗ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 49ರ ಸರಾಸರಿಯಲ್ಲಿ 295 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು ಬಾರಿಸಿದ 81 ರನ್ ಗರಿಷ್ಠ ಸ್ಕೋರ್ ಆಗಿದೆ. ಇವರ ಆಕರ್ಷಕ ಇನಿಂಗ್ಸ್‌ನಲ್ಲಿ 30 ಬೌಂಡರಿ 17 ಸಿಕ್ಸರ್‌ಗಳು ಸೇರಿವೆ. ಇವರು ತಮ್ಮದೇ ತಂಡದ ನಿಕೋಲಸ್ ಪೂರನ್ ಅವರಿಗಿಂತ 62 ರನ್ ಹಿಂದಿದ್ದಾರೆ.
ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಟಾಪ್ ರನ್ ಗೆಟರ್ಸ್ ಲೀಸ್ಟ್‌ನಲ್ಲಿ ಕಾಣಿಸಿಕಳ್ಳುತ್ತಾರೆ. ತಮ್ಮ ಬ್ಯಾಟಿಂಗ್ ಧಾಟಿಯನ್ನು ಕೊಂಚ ಬದಲಿಸಿಕೊಂಡಿರುವ ಶ್ರೇಯಸ್ ಅಪ್‌ಡೇಟ್ ವರ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಡುಕೊಂಡಿದ್ದ ತಮ್ಮ ಲಯವನ್ನು ಶ್ರೇಯಸ್ ಐಪಿಎಲ್‌ನಲ್ಲೂ ಮುಂದುವರೆಸಿದ್ದಾರೆ. ತಮ್ಮ ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಪ್ರದರ್ಶನವೇ ದೊಡ್ಡದೂ ಎಂದು ನಂಬಿರುವ ಶ್ರೇಯಸ್ ಭವಿಷ್ಯದ ನಾಯಕನಾಗುವತ್ತ ಚಿತ್ತ ನೆಟ್ಟಿದ್ದಾರೆ. ಇವರ ಬ್ಯಾಟಿಂಗ್ ಧಾಟಿ ಯುವ ಆಟಗಾರರಿಗೆ ಪ್ರೇರಣೆ.
ಶ್ರೇಯಸ್ ಅಯ್ಯರ್ ಆಡಿದ 6 ಪಂದ್ಯಗಳಲ್ಲಿ 250 ರನ್ ಸಿಡಿಸಿದ್ದು, ಆರೆಂಜ್ ಕ್ಯಾಪ್ ಪಡೆಯುವ ಕನಸು ಕಾಣುತ್ತಿದ್ದಾರೆ. ಇವರು ಪ್ರಸಕ್ತ ಲೀಗ್‌ನಲ್ಲಿ 204 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕುತ್ತಿದ್ದಾರೆ. ಇವರು 16 ಬೌಂಡರಿ, 20 ಸಿಕ್ಸರ್ ಬಾರಿಸಿ ಅಬ್ಬರಿಸಿದ್ದಾರೆ. ತಾವು 250 ರನ್‌ಗಳಲ್ಲಿ ಶ್ರೇಯಸ್ 184 ರನ್‌ಗಳನ್ನು ಬೌಂಡರಿ ಸಿಕ್ಸರ್‌ಗಳಿಂದಲೇ ಬಾರಿಸಿದ್ದಾರೆ.

ಈಗಾಗಲೇ ಐಪಿಎಲ್‌ನಲ್ಲಿ ಎರಡೂ ಬಾರಿ ಆರೆಂಜ್ ಕ್ಯಾಪ್ ಗೆದ್ದಿರುವ ವಿರಾಟ್ ಮೂರನೇ ಬಾರಿ ಕ್ಯಾಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಈ ಮೂಲಕ ಯಾರು ಮಾಡದ ಸಾಧನೆಯನ್ನು ಮಾಡುವ ಹುಮ್ಮಸ್ಸಿನಲ್ಲಿ ವಿರಾಟ್ ಇದ್ದಾರೆ. ಈ ಬಾರಿ ವಿರಾಟ್ ಕ್ಲಾಸಿಕ್ ಫಾರ್ಮ್‌ನಲ್ಲಿದ್ದಾರೆ. ವಿರಾಟ್ 2016 ಹಾಗೂ 2024ರಲ್ಲಿ ಆರೆಂಜ್ ಕ್ಯಾಪ್ ಗೆದ್ದ ಹಿರಿಮೆ ಹೊಂದಿದ್ದಾರೆ. ಈ ಬಾರಿಯೂ ಇವರು ಇದೇ ಸಾಧನೆ ಮಾಡುವತ್ತ ಚಿತ್ತ ನೆಟ್ಟಿದ್ದಾರೆ.
ವಿರಾಟ್ ಆಡಿರುವ 6 ಪಂದ್ಯಗಳಲ್ಲಿ 62ರ ಸರಾಸರಿಯಲ್ಲಿ 248 ರನ್ ಸಿಡಿಸಿದ್ದಾರೆ. ಈ ವೇಳೆ ಇವರು 20 ಬೌಂಡರಿ, 10 ಸಿಕ್ಸರ್ ಸಹ ಸಿಡಿಸಿದ್ದಾರೆ. ವಿರಾಟ್ ಈ ಲೀಗ್‌ನಲ್ಲಿ ಇನ್ನು ಕನಿಷ್ಠ 8 ಪಂದ್ಯಗಳನ್ನು ಆಡಲಿದ್ದು, ಈ ಪ್ರದರ್ಶನ ಹೀಗೆ ಮುಂದುವರೆಸಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.
ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಫಿಲ್ ಸಾಲ್ಟ್ ಸಹ ಕಾಣಿಸಿಕೊಳ್ಳುತ್ತಾರೆ. ಇವರು ಆಡಿದ 6 ಪಂದ್ಯಗಳಲ್ಲಿ 186 ರನ್ ಸಿಡಿಸಿದ್ದಾರೆ. ಇನ್ನು ಆರ್‌ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ನಾಯಕ ರಜತ್ ಪಟಿದಾರ್ ಸಹ 119 ರನ್ ಬಾರಿಸಿ ಭರವಸೆಯನ್ನು ಮೂಡಿಸಿದ್ದಾರೆ.