ಇತ್ತೀಚಿಗೆ ಅಬುದಾಬಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜು ನಡೆಯಿತು. ಈ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಸಹ ಇದ್ದರು. ಆದರೆ ಅವರು ಹರಾಜಿನಲ್ಲಿ ಬಿಕರಿಯಾಗಲಿಲ್ಲ. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎಟಿ20 ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೆ ಹ್ಯಾಟ್ರಿಕ್ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಬೌಲರ್ ಈ ಲೀಗ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.
ಗುರುವಾರ ಎಸ್‌ಎ20 ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಪರ್ಲ್ ರಾಯಲ್ಸ್ ನಡುವೆ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರ ಶಾಯ್ ಹೋಪ್ (25), ಡೇವಾಲ್ಡ್ ಬ್ರೆವಿಸ್ (21), ಶೆರ್ಫೇನ್ ರುದರ್ಫೋರ್ಡ್ (29), ಆಂಡ್ರೆ ರಸೆಲ್ (15) ಮಾತ್ರ ಎರಡಂಕಿ ಮುಟ್ಟಿ ಸಾಧನೆ ಮಾಡಿದರು. ಉಳಿದ ಬ್ಯಾಟರ್‌ಗಳು ಒಂದಂಕಿಯಲ್ಲಿ ಆಟ ಮುಗಿಸಿದರು. ಈ ವೇಳೆ ಪರ್ಲ್ ರಾಯಲ್ಸ್ ತಂಡದ ಪರ ಬೌಲರ್ ಒಟ್ನೀಲ್ ಬಾರ್ಟ್‌ಮ್ಯಾನ್ ಅಮೋಘ ದಾಳಿ ನಡೆಸಿದರು.

ಐಪಿಎಲ್ 2026ರಲ್ಲಿ ಬಿಕರಿಯಾಗದೆ ಉಳಿದ ಒಟ್ನೀಲ್ ಬಾರ್ಟ್‌ಮ್ಯಾನ್ ಪರ್ಲ್ ರಾಯಲ್ಸ್ ಪರ ಬಿಗುವಿನ ದಾಳಿ ನಡೆಸಿ ಮಿಂಚಿದರು. ಇವರು ಆರಂಭದಿಂದಲೂ ಮಾರಕ ದಾಳಿ ನಡೆಸಿದರು. ಪವರ್ ಪ್ಲೇನಲ್ಲಿ ಎರಡು ವಿಕೆಟ್ ಕಬಳಿಸಿದ ಬಾರ್ಟ್‌ಮ್ಯಾನ್, ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದರು. 19ನೇ ಓವರ್‌ನ ಮೊದಲ ಎಸೆತದಲ್ಲಿ ಆಂಡ್ರೆ ರಸೆಲ್, ಎರಡನೇ ಎಸೆತದಲ್ಲಿ ಲಿಜಾದ್ ವಿಲಿಯಮ್ಸ್, ಮೂರನೇ ಎಸೆತದಲ್ಲಿ ಲುಂಗಿ ಎನ್‌ಗಿಡಿ ಅವರನ್ನು ಔಟ್ ಮಾಡಿದ ಬಾರ್ಟ್‌ಮ್ಯಾನ್ ಆರ್ಭಟಿಸಿದರು. ಈ ಮೂಲಕ ಬಾರ್ಟ್‌ಮ್ಯಾನ್ ಎಸ್‌ಎ20ಯಲ್ಲಿ 5 ವಿಕೆಟ್ ಗೊಂಚಲು ಪಡೆದರು.
ಬಾರ್ಟ್‌ಮ್ಯಾನ್ 4 ಓವರ್‌ಗಳಲ್ಲಿ 1 ಮೇಡನ್ ಮಾಡಿ 16 ರನ್‌ಗಳಿಗೆ 5 ವಿಕೆಟ್ ಕಬಳಿಸಿದರು. ಈ ಮೂಲಕ ಬಾರ್ಟ್‌ಮ್ಯಾನ್ ಈ ಲೀಗ್‌ನಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ಸಾಧನೆಯನ್ನು ಸ್ಟಾರ್ ವೇಗದ ಬೌಲರ್ ಲುಂಗಿ ಎನ್‌ಗಿಡಿ ಈ ಸಾಧನೆ ಮಾಡಿದ್ದರು.
ಗುರಿಯನ್ನು ಹಿಂಬಾಲಿಸಿದ ಪರ್ಲ್ ರಾಯಲ್ಸ್ ಆರಂಭವೂ ಸಹ ಕಳಪೆಯಾಗಿತ್ತು. 17 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರೂಬಿನ್ ಹರ್ಮನ್ ಮತ್ತು ಡಾನ್ ಲಾರೆನ್ಸ್ ಜೋಡಿ 33 ಎಸೆತಗಳಲ್ಲಿ 52 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ರೂಬಿನ್ ಹರ್ಮನ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಔಟ್ ಆದರು. ಡಾನ್ ಲಾರೆನ್ಸ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 41 ರನ್ ಸಿಡಿಸಿದರು. ಭರವಸೆಯ ಆಟಗಾರ ಡೇವಿಡ್ ಮಿಲ್ಲರ್ ಅಜೇಯ 28 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.