
ಕೇಪ್ ಟೌನ್, ಆಗಸ್ಟ್ 05: ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಅಗ್ರಮಾನ್ಯರಾದ ಡೇಲ್ ಸ್ಟೇನ್, ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (ಸಿಎಸ್‌ಎ) ಬಿಡುಗಡೆ ಮಾಡಿರುವ ಡೇಲ್ ಸ್ಟೇನ್ ಅವರ ಹೇಳಿಕೆಯಲ್ಲಿ ತಮ್ಮ ವೃತ್ತಿ ಬದುಕನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿರುವ ಸ್ಟೇನ್ ಅವರೊಟ್ಟಿಗೆ ಸಿಎಸ್‌ಎ ರಾಷ್ಟ್ರೀಯ ಒಪ್ಪಂದ ಪಡೆದ ಆಟಗಾರನಾಗಿ ಮುಂದುವರಿಸುವುದಾಗಿ ಹೇಳಿದೆ.
"ಇಂದು ನನ್ನ ಅತ್ಯಂತ ಪ್ರೀತಿಯ ಕ್ರಿಕೆಟ್ ಮಾದರಿಯಿಂದ ದೂರ ಸರಿಯುತ್ತಿದ್ದೇನೆ. ನನ್ನ ಪ್ರಕಾರ ಕ್ರಿಕೆಟ್‌ನ ಅತ್ಯತ್ತಮ ಮಾದರಿ ಟೆಸ್ಟ್ ಕ್ರಿಕೆಟ್. ನಿಮ್ಮ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಸಾಮರ್ಥ್ಯವೆಲ್ಲವನ್ನೂ ಟೆಸ್ಟ್ ಕ್ರಿಕೆಟ್ ಪರೀಕ್ಷಿಸುತ್ತದೆ," ಎಂದು ಸ್ಟೇನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಮುಂದೆಂದೂ ಟೆಸ್ಟ್ ಆಡುವುದಿಲ್ಲ ಎಂದು ನಿರ್ಧರಿಸುವುದು ನಿಜಕ್ಕೂ ಕಷ್ಟದ ನಿರ್ಧಾರ. ಮುಂದೆಂದು ಆಡಲು ಸಾಧ್ಯವಾಗುವುದಿಲ್ಲ ಎಂಬುದು ಮತ್ತಷ್ಟು ಬೇಸರ ತರುತ್ತದೆ. ನನ್ನ ವೃತ್ತಿ ಬದುಕಿನ ಮುಂದಿನ ದಿನಗಳಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್ ಕಡೆಗೆ ಹೆಚ್ಚು ಗಮನ ನೀಡಲಿದ್ದೇನೆ," ಎಂದಿದ್ದಾರೆ.
36 ವರ್ಷದ ಅನುಭವಿ ವೇಗದ ಬೌಲರ್ ಡೇಲ್ ಸ್ಟೇನ್ 2004ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಡಿದ 93 ಪಂದ್ಯಗಳಿಂದ 439 ವಿಕೆಟ್‌ಗಳನ್ನು ಪಡೆದಿರುವ ಸ್ಟೇನ್, ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಕಳೆದ ಫಬ್ರವರಿಯಲ್ಲಿ ಅವರು ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.
ಡೇಲ್ ಸ್ಟೇನ್ ಟೆಸ್ಟ್ ಸಾಧನೆ
93 ಪಂದ್ಯ
439 ವಿಕೆಟ್
7/51 ಶ್ರೇಷ್ಠ ಸಾಧನೆ
11/60 ಪಂದ್ಯವೊಂದರಲ್ಲಿ ಶ್ರೇಷ್ಠ ಸಾಧನೆ
22.95 ಸರಾಸರಿ
3.24 ಎಕಾನಮಿ
42.3 ಸ್ಟ್ರೈಕ್‌ರೇಟ್
27 ನಾಲ್ಕು ವಿಕೆಟ್ ಸಾಧನೆ
26 ಐದು ವಿಕೆಟ್ ಸಾಧನೆ
05 ಹತ್ತು ವಿಕೆಟ್ ಸಾಧನೆ