
ವೇಗಿ ಉಮೇಶ್ ಯಾದವ್ ಗಾಯಗೊಂಡ ಹಿನ್ನೆಲೆಯಲ್ಲಿ ಟೆಸ್ಟ್ ತಂಡದಲ್ಲಿ ಎಡಗೈ ವೇಗದ ಬೌಲರ್ ಟಿ ನಟರಾಜನ್ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಿಡ್ನಿ ಅಂಗಳದಲ್ಲಿ ಮೂರನೇ ಪಂದ್ಯಕ್ಕಾಗಿ ತಯಾರಿಯನ್ನು ಟೀಮ್ ಇಂಡಿಯಾ ಆಟಗಾರರು ನಡೆಸುತ್ತಿದ್ದು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕಣ್ಗಾವಲಿನಲ್ಲಿ ಕಠಿಣ ಅಭ್ಯಾಸವನ್ನು ನಡೆಸಿದ್ದಾರೆ. ಈ ವೇಳೆ ನಟರಾಜನ್ ಎಲ್ಲರ ಗಮನಸೆಳೆದಿದ್ದಾರೆ.
ಬಿಸಿಸಿಐನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಕಠಿಣವಾಗಿರುವ ಕ್ಯಾಚ್‌ವೊಂದನ್ನು ಹಿಮ್ಮುಖವಾಗಿ ಓಡಿಕೊಂಡು ಹಿಡಿಯುವಲ್ಲಿ ಟಿ ನಟರಾಜನ್ ಯಶಸ್ವಿಯಾಗಿದ್ದಾರೆ. ಈ ಅದ್ಭುತ ಕ್ಯಾಚ್ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು ಅಭಿಮಾನಿಗಳು ನಟರಾಜನ್ ಅವರ ತಲ್ಲೀನತೆಯ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
@Natarajan_91 has been grabbing his chances very well on this tour. 😁🙌 #TeamIndia #AUSvIND pic.twitter.com/sThqgZZq1k
— BCCI (@BCCI) January 3, 2021
ಬಿಸಿಸಿಐ ಟಿ ನಟರಾಜನ್ ಹಿಡಿದ ಈ ಕ್ಯಾಚ್‌ಗೆ ಉತ್ತಮವಾದ ಅಡಿಬರಹವೊಂದನ್ನು ನೀಡಿದೆ. "ನಟರಾಜನ್ ಈ ಪ್ರವಾಸದಲ್ಲಿ ತನಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಾಚಿಕೊಳ್ಳುತ್ತಿದ್ದಾರೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ಐಪಿಎಲ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ನಟರಾಜನ್ ಆಸಿಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗಿದ್ದರು. ಅಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಎಲ್ಲ ಗಮನಸೆಳೆಯುವಲ್ಲಿ ನಟರಾಜನ್ ಯಶಸ್ವಿಯಾಗಿದ್ದರು.
ನಟರಾಜನ್ ಆಸಿಸ್ ಪ್ರವಾಸದ ಸೀಮಿತ ಓವರ್‌ಗಳ ಸರಣಿಗೆ ಮಾತ್ರವೇ ಆಯ್ಕೆಯಾಗಿದ್ದರು. ಆದರೆ ಸೀಮಿತ ಓವರ್‌ಗಳ ಸರಣಿ ಅಂತ್ಯವಾದ ಬಳಿಕವೂ ನಟರಾಜನ್ ಅವರನ್ನು ಟೆಸ್ಟ್ ತಂಡದ ಜೊತೆಯಲ್ಲೇ ಉಳಿಸಿಕೊಲ್ಳಲಾಗಿತ್ತು. ಎರಡನೇ ಟೆಸ್ಟ್ ವೇಳೆಯಲ್ಲಿ ಉಮೇಶ್ ಯಾದವ್ ಗಾಯಗೊಂಡ ಕಾರಣ ಟಿ ನಟರಾಜನ್ ಅವರನ್ನು ಕಳೆದ ಶುಕ್ರವಾರ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಶುಕ್ರವಾರ ಮೆಲ್ಬರ್ನ್‌ನಲ್ಲಿ ಭಾರೀ ಮಳೆಯಾಗಿದ್ದು ಭಾರತದ ಅಭ್ಯಾಸ ಶಿಬಿರ ರದ್ದಾಗಿತ್ತು. ಮೂರನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯಲಿದ್ದು ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಆಟಗಾರರು ಸೋಮವಾರ ಮೆಲ್ಬರ್ನ್‌ನಿಂದ ಸಿಡ್ನಿಗೆ ಪ್ರಯಾಣವನ್ನು ಬೆಳೆಸಲಿದ್ದಾರೆ.