ಅಹಮದಾಬಾದ್: ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯ ಎಲೈಟ್ ಎ ಗುಂಪಿನಲ್ಲಿ 80 ರನ್‌ಗಳಿಂದ ತ್ರಿಪುರಾ ತಂಡವನ್ನು ಮಣಿಸಿತು. ಈ ಮೂಲಕ ಕರ್ನಾಟಕ ಆಡಿದ ಐದು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದು ಕೊಂಡಿದೆ.
ತ್ರಿಪುರಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ನಾಯಕ ಮಯಾಂಕ್ ಅಗರ್‌ವಾಲ್ (5), ಕರುಣ್ ನಾಯರ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. 6 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕ ತಂಡಕ್ಕೆ ದೇವದತ್ ಪಡಿಕ್ಕಲ್ ಹಾಗೂ ಆರ್.ಸ್ಮರಣ್ ಆಧಾರವಾದರು. ಈ ಜೋಡಿ ತ್ರಿಪುರಾ ತಂಡದ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ತ್ರಿಪುರಾ ವಿಫಲವಾಯಿತು. ಸುಮಾರು 25 ಓವರ್‌ಗಳ ಕಾಲ ವಿಕೆಟ್ ಬೀಳದಂತೆ ನೋಡಿಕೊಂಡು ಆಡಿದ ಜೋಡಿ ಅಬ್ಬರಿಸಿತು. ಆರ್ ಸ್ಮರಣ್ 82 ಎಸೆತಗಳಲ್ಲಿ 8 ಬೌಂಡರಿ 60 ರನ್ ಸಿಡಿಸಿದರು.

ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಕೆಎಲ್ ರಾಹುಲ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ರಾಹುಲ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್ ಸಿಡಿಸಿದರು.
ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ಭರ್ಜರಿ ಫಾರ್ಮ್ ಮುಂದುವರೆಸಿದರು. ಇವರು ಆಡಿದ 120 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 108 ರನ್ ಬಾರಿಸಿ ಔಟ್ ಆದರು. ಪ್ರಸಕ್ತ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಿಡಿಸಿದ ನಾಲ್ಕನೇ ಶತಕವಾಗಿದೆ.
ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಅಭಿನವ್ ಮನೋಹರ್ ಅವರು ಆರ್ಭಟ ನಡೆಸಿದರು. ಇವರು ಕೇವಲ 43 ಎಸೆತಗಳಲ್ಲಿ 4 ಸಿಕ್ಸರ್, 6 ಬೌಂಡರಿ ನೆರವಿನಿಂದ ಅಜೇಯ 79 ರನ್ ಸಿಡಿಸಿದರು. ಶ್ರೇಯಸ್ ಗೋಪಾಲ್ ತಮ್ಮ ನೈಜ ಆಟವನ್ನು ಆಡಿ ತಂಡಕ್ಕೆ ಆಧಾರವಾದರು. ಇವರು 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿದರು. ಅಂತಿಮವಾಗಿ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 332 ರನ್ ಸೇರಿಸಿತು. ತ್ರಿಪುರಾ ತಂಡದ ಪರ ಅಭಿಜಿತ್ ಸರ್ಕಾರ್ 4 ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ತ್ರಿಪುರಾ ತಂಡದ ಆರಂಭ ಕಳಪೆಯಾಗಿತ್ತು. ತಂಡ 59 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಆರನೇ ವಿಕೆಟ್‌ಗೆ ರಜತ್ ದೇಯ್ ಹಾಗೂ ಸ್ವಪ್ನಿಲ್ ಸಿಂಗ್ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಮಧ್ಯಮ ಕ್ರಮಾಂಕದಲ್ಲಿ ರಜತ್ 5 ಬೌಂಡರಿ ಸಹಾಯದಿಂದ 66 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ವಪ್ನಿಲ್ ಸಿಂಗ್ 93 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ 100 ರನ್ ಬಾರಿಸಿ ಮಿಂಚಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ತ್ರಿಪುರಾ 49 ಓವರ್‌ಗಳಲ್ಲಿ 252 ರನ್ ಬಾರಿಸಿ ಸೋಲು ಕಂಡಿತು. ಕರ್ನಾಟಕದ ಪರ ವಿಜಯ್‌ಕುಮಾರ್ ವೈಶಾಖ್, ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಪಡೆದರು. ಈ ಸೋಲಿನ ಮೂಲಕ ತ್ರಿಪುರಾ ಆಡಿದ 5 ಪಂದ್ಯಗಳಲ್ಲಿ 2 ಜಯ, 3 ಸೋಲು ಕಂಡಿದ್ದು ಎ ಗುಂಪಿನ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮಧ್ಯ ಪ್ರದೇಶ, ಮೂರನೇ ಸ್ಥಾನದಲ್ಲಿ ಜಾರ್ಖಂಡ್, ನಾಲ್ಕನೇ ಸ್ಥಾನದಲ್ಲಿ ಕೇರಳ ಇದೆ.