ಕೊಹ್ಲಿಯನ್ನು ಟೀಕಿಸೋಕೆ ಇವರೆಲ್ಲಾ ಯಾರು?: ಟೀಮ್ ಇಂಡಿಯಾ ದಿಗ್ಗಜನನ್ನು ಹಾಡಿ ಹೊಗಳಿದ ಪಾಕ್ ಕ್ರಿಕೆಟಿಗ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಸುದೀರ್ಘ ಕಾಲದಿಂದ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಅಮೋಘ ಶತಕದ ಮೂಲಕ ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೀಡಿದ ಈ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ಆಮಿರ್ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ದೋಹಾದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಂದರ್ಭದಲ್ಲಿ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಮೊಹಮ್ಮದ್ ಆಮಿರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶತಕ ಸುದೀರ್ಘ ಕಾಲದ ಬಳಿಕ ಟೆಸ್ಟ್‌ನಲ್ಲಿ ಶತಕ ಸಿಡಿಸಿರುವ ವಿಚಾರವಾಗಿ ಅನಿಸಿಕೆ ಹಂಚಿಕೊಂಡಿರುವ ಆಮಿರ್ ವಿರಾಟ್ ಕೊಹ್ಲಿಯ ಟೀಕಾಕಾರರ ವಿರುದ್ಧ ಕಿಡಿಕಾರಿದ್ದಾರೆ.

ಕೊಹ್ಲಿಯನ್ನು ಟೀಕಿಸಲು ಇವರು ಯಾರು?
ವಿರಾಟ್ ಕೊಹ್ಲಿ ಸುದೀರ್ಘ ಕಾಲದಿಂದ ಶತಕ ಸಿಡಿಸಲು ಸಾಧ್ಯವಾಗದ ಬಗ್ಗೆ ಟೀಕೆಗಳಿಗೆ ಸಂಬಂಧಿಸಿದಂತೆ ಮೊಹಮ್ಮದ್ ಆಮಿರ್ ಮಾತನಾಡಿದರು. "ವಿರಾಟ್ ಕೊಹ್ಲಿಯನ್ನು ಟೀಕಿಸಲು ಇವರೆಲ್ಲಾ ಯಾರು? ನಿಜಕ್ಕೂ ನನಗೆ ಇದು ಅರ್ಥವಾಗುತ್ತಿಲ್ಲ. ಅಂತಿಮವಾಗಿ ಆತ ಕೂಡ ಮನುಷ್ಯ. ನೀವು ಬಟನ್ ಒತ್ತಿದಾಕ್ಷಣ ಶತಕ ಸಿಡಿಸಲು ಅಸಾಧ್ಯ, ಆದರೆ ಕೊಹ್ಲಿ ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲರು. ಎಲ್ಲಾ ಆಟಗಾರರು ಕೂಡ ಏರಿಳಿತಗಳನ್ನು ಅನುಭವಿಸುತ್ತಾರೆ" ಎಂದಿದ್ದಾರೆ ಮೊಹಮ್ಮದ್ ಆಮಿರ್.

ಅದೃಷ್ಟವೂ ಜೊತೆಗಿರಬೇಕು
ಮುಂದುವರಿದು ಮಾತನಾಡಿದ ಅವರು "ಕೆಲ ಸಂದರ್ಭಗಳಲ್ಲಿ ನಾನು ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ ಎನಿಸುತ್ತದೆ ಆದರೆ ನನಗೆ ವಿಕೆಟ್‌ಗಳು ದೊರೆತಿರುವುದಿಲ್ಲ. ಆದರೆ ಇನ್ನೂ ಕೆಲ ಸಂದರ್ಭಗಳಲ್ಲಿ ಕೆಟ್ಟದಾಗಿ ಬೌಲಿಂಗ್ ಮಾಡುತ್ತಿರುತ್ತೇನೆ, ಪುಟ್‌ಟಾಸ್ ಮುಂತಾದ ಎಸೆತಗಳನ್ನು ಹಾಕಿರುತ್ತೇನೆ. ಹಾಗಿದ್ದರೂ ವಿಕೆಟ್‌ಗಳು ಬಿದ್ದಿರುತ್ತವೆ. ಅದಕ್ಕಾಗಿ ನಿಮಗೆ ಅದೃಷ್ಟ ಕೂಡ ಬೇಕಾಗುತ್ತದೆ. ಆದರೆ ವಿರಾಟ್ ಕೊಹ್ಲಿಯ ಕಠಿಣ ಪರಿಶ್ರಮದ ಬಗ್ಗೆ ನೀವು ಅನುಮಾನ ಪಡುವ ಹಾಗಿಲ್ಲ. ಆತನಿಗೆ ಸವಾಲೆಂದರೆ ಇಷ್ಟ. ಪ್ರತಿ ಬಾರಿ ಆತ ಟೀಕೆಗೆ ಒಳಗಾದಾಗಲೂ ಆತ ಪುಟಿದೆದ್ದು ಟೀಕಾಕಾರರ ಟೀಕೆಗಳನ್ನು ಸುಳ್ಳಾಗಿಸಿದ್ದಾರೆ" ಎಂದಿದ್ದಾರೆ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ಆಮಿರ್.

ಎಲ್ಲಾ ಮಾದರಿಯಲ್ಲೂ ಫಾರ್ಮ್ ಕಂಡುಕೊಂಡ ಕೊಹ್ಲಿ
ವಿರಾಟ್ ಕೊಹ್ಲಿ 2019ರ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಾರ್ಮ್ ಕಳೆದುಕೊಂಡು ಸುದೀರ್ಘ ಕಾಲ ಶತಕಗಳಿಸಲು ವಿಫಲವಾಗಿದ್ದರು. ಮೂರು ಮಾದರಿಯಲ್ಲಿಯೂ ರನ್‌ಗಳಿಸಲು ಪರದಾಡಿದ್ದ ಕೊಹ್ಲಿ ಕಳೆದ ವರ್ಷ ನಡೆದ ಏಷ್ಯಾ ಕಪ್‌ನಲ್ಲಿ ಅಪ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದರು. ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸಿದ ಕೊಹ್ಲಿ ಬಳಿಕ ಏಕದಿನ ಮಾದರಿಯಲ್ಲಿಯೂ ಶತಕ ಸಿಡಿಸಿದ್ದರು. ಕಳೆದ ಮೂರು ತಿಂಗಳಿನಲ್ಲಿ ಕೊಹ್ಲಿ ಏಕದಿಮ ಮಾದರಿಯಲ್ಲಿ ಮೂರು ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದರೂ ಕೊಹ್ಲಿ ರನ್ ಮಳೆ ಹರಿಸಿ ಮಿಂಚಿದ್ದರು. ಇದೀಗ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿಯೂ ಫಾರ್ಮ್‌ಗೆ ಮರಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲು ಆಮಿರ್ ಸಜ್ಜು
ಇನ್ನು ಇತ್ತ ಮೊಹಮ್ಮದ್ ಆಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2019ರಲ್ಲಿಯೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಮ್ಮ ನಿವೃತ್ತಿ ಪ್ರಕಟಿಸಿದ್ದರು. ಬಳಿಕ ದೇಶೀಯ ಕ್ರಿಕೆಟ್ ಹಾಗೂ ಲೀಗ್ ಕ್ರಿಕೆಟ್‌ಗಳಲ್ಲಿ ಮೊಹಮ್ಮದ್ ಆಮಿರ್ ಸಕ್ರಿಯವಾಗಿದ್ದಾರೆ. ಆದರೆ ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಡಳಿತದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗಿರುವ ಹಿನ್ನೆಲೆಯಲ್ಲಿ ಮೊಹಮ್ಮದ್ ಆಮಿರ್ ನಿವೃತ್ತಿ ವಾಪಾಸ್ ಪಡೆದು ರಾಷ್ಟ್ರೀಯ ತಂಡಕ್ಕೆ ಮರಳುವ ಸಾಧ್ಯತೆಗಳು ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications