'ಮೈದಾನದಲ್ಲಿ ಗುಮ್ಮನಾಗಿರಬೇಡಿ, ಕೊಹ್ಲಿಯಂತೆ ಉಪಸ್ಥಿತಿ ತೋರಿಸಿ'; ರೋಹಿತ್‌ಗೆ ಪಾಕ್ ಮಾಜಿ ಕ್ರಿಕೆಟಿಗ ಸಲಹೆ
ಜುಲೈ ತಿಂಗಳಿನಲ್ಲಿ ಭಾರತ ಕ್ರಿಕೆಟ್ ತಂಡ ಬಹು-ಮಾದರಿಯ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಶುಕ್ರವಾರ, ಜೂನ್ 23ರಂದು ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿತು.
ಖಾಯಂ ನಾಯಕ ರೋಹಿತ್ ಶರ್ಮಾ ಎರಡೂ ಮಾದರಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದರೆ, ಅಜಿಂಕ್ಯ ರಹಾನೆ ಟೆಸ್ಟ್ ಸರಣಿ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಏಕದಿನ ಸರಣಿಗೆ ಉಪನಾಯಕರನ್ನಾಗಿ ನಿಯೋಜಿಸಲಾಗಿದೆ.

ಭಾರತ ಟೆಸ್ಟ್ ತಂಡದಲ್ಲಿ ಮತ್ತೊಂದು ದೊಡ್ಡ ಬದಲಾವಣೆ ಎಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರನ್ನು ತಂಡದಿಂದ ಹೊರಹಾಕಲಾಗಿದೆ.
ಈ ಕುರಿತು ಭಾರತ ತಂಡವನ್ನು ವಿಶ್ಲೇಷಿಸಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್, ಮುಂಬರುವ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಇಲ್ಲಿಯವರೆಗೆ ಭಾರತದ ಟೆಸ್ಟ್ ನಾಯಕರಾಗಿ ಅಲ್ಪಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಹಿಂದಿನ ನಾಯಕ ವಿರಾಟ್ ಕೊಹ್ಲಿಯಂತೆಯೇ ಮೈದಾನದಲ್ಲಿ ಸ್ವಲ್ಪ ಹೆಚ್ಚಿನ ಅಧಿಕಾರವನ್ನು ತೋರಿಸಬೇಕಾಗಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
"ಇದೊಂದು ಸಮತೋಲಿತ ತಂಡವಾಗಿದ್ದು, ಭಾರತ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿದೆ. ನಾಯಕತ್ವದಲ್ಲಿ ರೋಹಿತ್ ಶರ್ಮಾ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನಾನು ಬಯಸುತ್ತೇನೆ. ಮಾಜಿ ನಾಯಕ ವಿರಾಟ್ ಕೊಹ್ಲಿಯಂತೆ ಮೈದಾನದಲ್ಲಿ ತಮ್ಮ ಉಪಸ್ಥಿತಿಯನ್ನು ತೋರಿಸಿಬೇಕಿದೆ," ಎಂದು ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟರು.
"ವಿರಾಟ್ ಕೊಹ್ಲಿ ಸ್ವಯಂ ಆಗಿ ನಾಯಕತ್ವದಿಂದ ಕೆಳಗಿಳಿದ ನಂತರ, ರೋಹಿತ್ ಶರ್ಮಾ ಇಲ್ಲಿಯವರೆಗೆ ಯೋಗ್ಯವಾದ ಕೆಲಸವನ್ನು ಮಾಡಿದ್ದಾರೆ," ಎಂದು ಕಮ್ರಾನ್ ಅಕ್ಮಲ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಸರ್ಫರಾಜ್ ಖಾನ್, ಉಮ್ರಾನ್ ಮಲಿಕ್ ಹೊರಗಿಟ್ಟಿದ್ದನ್ನು ಪ್ರಶ್ನಿಸಿದ ಕಮ್ರಾನ್ ಅಕ್ಮಲ್
"ಭಾರತ ತಂಡದಲ್ಲಿ ಒಬ್ಬ ಅಥವಾ ಇಬ್ಬರು ಆಟಗಾರರ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತದೆ. ದಾಖಲೆಗಳನ್ನು ನೋಡಿದ ನಂತರ ನನ್ನ ನೆನಪಿಗೆ ಬರುವುದು ಒಬ್ಬ ಆಟಗಾರನೆಂದರೆ ಸರ್ಫರಾಜ್ ಖಾನ್. ಅವರನ್ನು ಆಡಿಸುವುದು ಸಾಧ್ಯವಾಗದಿದ್ದರೆ, ಅವರು ತಂಡದೊಂದಿಗೆ ಪ್ರಯಾಣಿಸಬೇಕಿತ್ತು," ಎಂದು ಕಮ್ರಾನ್ ಅಕ್ಮಲ್ ತಿಳಿಸಿದರು.
"ನಾವು ನಿಮ್ಮನ್ನು ನಿರ್ಲಕ್ಷಿಸುತ್ತಿಲ್ಲ ಮತ್ತು ಭವಿಷ್ಯದಲ್ಲಿ ನೀವು ರಾಷ್ಟ್ರೀಯ ತಂಡಕ್ಕೆ ಬರಲು ಅವಕಾಶವಿದೆ ಎಂದು ನೀವು ಅವನಿಗೆ ಒಂದು ಅವಕಾಶ ನೀಡಬಹುದಿತ್ತು. ಆತನನ್ನು ತಂಡಕ್ಕೆ ಸೇರಿಸಿಕೊಳ್ಳಲು ಇದು ಪರಿಪೂರ್ಣ ಪ್ರವಾಸವಾಗಿತ್ತು," ಎಂದರು.
"ಅಲ್ಲದೆ, ಉಮ್ರಾನ್ ಮಲಿಕ್ ಕೂಡ ಒಬ್ಬರು. ಆತನ ವೇಗದ ಬೌಲಿಂಗ್ ಎದುರಾಳಿ ಪಡೆಗೆ ಮಾರಕವಾಗಬಹುದು. ವೆಸ್ಟ್ ಇಂಡೀಸ್‌ನಲ್ಲಿ ಪಿಚ್ ಒಣದಾಗಿರುತ್ತದೆ ಮತ್ತು ಡ್ಯೂಕ್ಸ್ ಬಾಲ್‌ನೊಂದಿಗೆ ರಿವರ್ಸ್ ಸ್ವಿಂಗ್ ಇರುತ್ತದೆ. ಉಮ್ರಾನ್ ಉತ್ತಮವಾಗಿ ಕಾಣುತ್ತಿದ್ದರು," ಎಂದು ಕಮ್ರಾನ್ ಅಕ್ಮಲ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications