ಭಾನುವಾರ ಲಕ್ನೋದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತ ತಂಡ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಇಂಗ್ಲೆಂಡ್ ವಿರುದ್ಧ ಗೆಲುವಿನ ನಂತರ ಪಾಕಿಸ್ತಾನ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಅವರು ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು "ವಿಶ್ವದಲ್ಲೇ ಅತ್ಯುತ್ತಮ' ಎಂದು ಕರೆದಿದ್ದಾರೆ.

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಡೈನಾಮಿಕ್ ನ್ಯೂ-ಬಾಲ್ ಸ್ಪೆಲ್ 2023ರ ಐಸಿಸಿ ಏಕದಿನ ವಿಶ್ವಕಪ್ ಲೀಗ್ ಹಂತದಲ್ಲಿ ಇಂಗ್ಲೆಂಡ್ ತಂಡವನ್ನು ಹೆಡೆಮುರಿ ಕಟ್ಟಿತು. ಇದು ಭಾರತ ತಂಡಕ್ಕೆ ಅಕ್ಟೋಬರ್ 29ರಂದು ಲಕ್ನೋದಲ್ಲಿ ನಿರ್ಣಾಯಕ ಗೆಲುವನ್ನು ತಂದುಕೊಟ್ಟಿತು.
ಈ ಇಬ್ಬರು ವೇಗಿಗಳು ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿ ಹತ್ತು ವಿಕೆಟ್‌ಗಳಲ್ಲಿ ಏಳನ್ನು ಕಬಳಿಸಿದರು. ವಿಶೇಷವಾಗಿ, ಮೊಹಮ್ಮದ್ ಶಮಿ ಪಂದ್ಯಾವಳಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಗಳಿಸಿದ್ದಾರೆ.
ಪಾಕಿಸ್ತಾನದ ಲೆಜೆಂಡ್ ವೇಗಿ ವಾಸಿಂ ಅಕ್ರಮ್ ಭಾರತದ ವೇಗದ ಬೌಲರ್‌ಗಳನ್ನು ಶ್ಲಾಘಿಸಿದರು. ಸವಾಲಿನ ಪಿಚ್‌ನಲ್ಲಿ ಸಾಧಾರಣ ಮೊತ್ತವನ್ನು ರಕ್ಷಿಸುವ ಮೂಲಕ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸವನ್ನು ಛಿದ್ರಗೊಳಿಸಿದರು ಎಂದು ಹೇಳಿದರು.

ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿದ ನಂತರ, ಭಾರತದ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ, ಉತ್ಸಾಹಭರಿತ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಭಾರತದ ಬೌಲರ್‌ಗಳು ಘಾತಕ ಬೌಲಿಂಗ್ ಪ್ರದರ್ಶನ ನೀಡಿದರು.
"ಭಾರತೀಯ ವೇಗಿಗಳು ಅದ್ಭುತವಾಗಿ ಕಾಣುತ್ತಾರೆ. ಭಾರತದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಜಸ್ಪ್ರೀತ್ ಬುಮ್ರಾ ಜಗತ್ತಿನಲ್ಲೇ ಉತ್ತಮವಾಗಿ ಕಾಣುತ್ತಾರೆ. ಮೊಹಮ್ಮದ್ ಸಿರಾಜ್ ರನ್ ಬಿಟ್ಟುಕೊಟ್ಟರು ಮತ್ತು ಮೊಹಮ್ಮದ್ ಶಮಿ ಇಂಗ್ಲೆಂಡ್ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದರು," ಎಂದು ವಾಸಿಂ ಅಕ್ರಮ್ ತಿಳಿಸಿದರು.
ಭಾರತ ಹಿಂದೆ ಉಳಿದಿದೆ ಮತ್ತು ಇಂಗ್ಲೆಂಡ್ ತಂಡಕ್ಕೆ ಉತ್ತಮ ಅವಕಾಶವಿದೆ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ ಈ ವಿಶ್ವಕಪ್‌ನಲ್ಲಿ ನಾವು ಸಾಮಾನ್ಯವಾಗಿ ನೋಡುವುದಕ್ಕಿಂತ ಪಿಚ್ ವಿಭಿನ್ನವಾಗಿದೆ. ವಿಶೇಷವಾಗಿ ಭಾರತ ಬ್ಯಾಟಿಂಗ್ ಮಾಡುವಾಗ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟಕರವಾಗಿತ್ತು,'' ಎಂದು ವಾಸಿಂ ಅಕ್ರಮ್ "ಎ ಸ್ಪೋರ್ಟ್ಸ್' ಕಾರ್ಯಕ್ರಮದಲ್ಲಿ ಹೇಳಿದರು.

ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ತಮ್ಮ ಅಸಾಧಾರಣ ಪ್ರದರ್ಶನದ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಕ್ರಮಾಂಕವನ್ನು ಕೆಡವಿದರು ಎಂದು ವಾಸಿಂ ಅಕ್ರಮ್ ಅಭಿಪ್ರಾಯಪಟ್ಟರು.
ಭಾರತ ತಂಡ ಬ್ಯಾಟ್‌ನೊಂದಿಗೆ ಹೋರಾಟದ ಹೊರತಾಗಿಯೂ, ಅಂತಿಮವಾಗಿ 229 ರನ್‌ಗಳನ್ನು ಕಲೆಹಾಕಿತು. ನಂತರ ವೇಗಿಗಳು ಜೀವ ತುಂಬಿದರು ಮತ್ತು ಇಂಗ್ಲೆಂಡ್ ತಂಡವನ್ನು ಕೇವಲ 129 ರನ್‌ಗಳಿಗೆ ನಿಯಂತ್ರಿಸಿದರು. ಈ ತಿರುವು ಭಾರತದ ಛಲ ಮತ್ತು ಬೌಲರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾಗಿತ್ತು.
ಡೇವಿಡ್ ಮಲಾನ್ ಮತ್ತು ಜೋ ರೂಟ್ ಅವರ ಪ್ರಮುಖ ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಸೋಲಿಗೆ ನಾಂದಿ ಹಾಡಿದರು. ನಂತರ, ಕೊನೆಯಲ್ಲಿ ಮಾರ್ಕ್ ವುಡ್ ಅವರನ್ನು ಉತ್ತಮ ಯಾರ್ಕರ್ ಮೂಲಕ ಬೌಲ್ಡ್ ಮಾಡಿ ಇಂಗ್ಲೆಂಡ್ ಇನ್ನಿಂಗ್ಸ್‌ಗೆ ಅಂತ್ಯನೂ ಹಾಡಿದರು.
ಇದೇ ವೇಳೆ ಮೊಹಮ್ಮದ್ ಶಮಿ ಅವರ ಅಸಾಧಾರಣ ಪ್ರದರ್ಶನವು ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕ ಅಲುಗಾಡಿಸಿದರು. ಅಂತಿಮವಾಗಿ ಪಂದ್ಯ-ವಿಜೇತ ನಾಲ್ಕು ವಿಕೆಟ್‌ಗಳನ್ನು ಪಡೆದರು.