ರಾಹುಲ್ ದ್ರಾವಿಡ್ ಜೊತೆಗಿನ ಫೋಟೋ ಹಿಂದಿನ ಸ್ಪೂರ್ತಿಯ ಕಥೆ ಹೇಳಿದ ಪಾಕ್ ಯುವ ವೇಗಿ

ಟೀಮ್ ಇಂಡಿಯಾ ಕೋಚ್ ಹಾಗೂ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬುಧವಾರ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಕಂಡ ಈ ಶ್ರೇಷ್ಠ ಆಟಗಾರನ ಹುಟ್ಟುಹಬ್ಬಕ್ಕೆ ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಅಪಾರ ಅಭಿಮಾನಿಗಳು ಶುಭಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಯುವ ವೇಗದ ಬೌಲರ್ ದ್ರಾವಿಡ್ ಹುಟ್ಟುಹಬ್ಬದ ದಿನ ಹಂಚಿಕೊಂಡಿರುವ ಫೋಟೋ ಹಾಗೂ ಅದರೊಂದಿಗೆ ಬರೆದುಕೊಂಡಿರುವ ಕುತೂಹಲಕಾರಿ ಅಂಶ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುತ್ತಿದೆ.
ಪಾಕಿಸ್ತಾನ ತಂಡದ ಯುವ ವೇಗದ ಬೌಲರ್ ಶಹ್ನವಾಜ್ ದಹಾನಿ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ಅವರನ್ನು ಭೇಟಿಯಾದ ವಿಶೇಷ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗ ತೋರಿದ ಮರೆಯಲಾಗದ ವರ್ತನೆಯಿಂದ ತಾನು ಜೀವಮಾನದ ಅತ್ಯಂತ ಮೌಲ್ಯಯುತ ಪಾಠವನ್ನು ಕಲಿತುಕೊಂಡೆ ಎಂದಿದ್ದಾರೆ ಪಾಕಿಸ್ತಾನದ ಯುವ ವೇಗಿ ಶಹ್ನವಾಜ್ ದಹಾನಿ.

ಗೆಳೆಯರೊಂದಿಗೆ ಪಾರ್ಟಿಯಲ್ಲಿದ್ದ ದಹಾನಿ
ಕಳೆದ ವಿಶ್ವಕಪ್‌ನ ಸಂದರ್ಭದಲ್ಲಿ ಮೆಲ್ಬರ್ನ್‌ನ ರೆಸ್ಟೋರೆಂಟ್‌ವೊಂದರಲ್ಲಿ ಗೆಳೆಯರ ಜೊತೆಗೆ ರಾತ್ರಿಯ ಊಟವನ್ನು ಸವಿಯುತ್ತಿದ್ದಾಗ ದ್ರಾವಿಡ್ ಕೂಡ ಅಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ಕಂಡು ಸ್ವತಃ ದ್ರಾವಿಡ್ ಅವರೇ ತಾವಿದ್ದ ಸೀಟ್‌ನ ಬಳಿ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದರು ಎಂದು ದಹಾನಿ ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ ದಹಾನಿ.
ದಹಾನಿ ಬರೆದುಕೊಂಡಿರುವುದೇನು?
ರಾಹುಲ್ ದ್ರಾವಿಡ್ ಜೊತೆಗಿನ ಫೋಟೋ ಹಂಚಿಕೊಂಡು "ಅತ್ಯಂತ ವಿನಮ್ರ ವ್ಯಕ್ತಿ ಸರ್ ರಾಹುಲ್ ದ್ರಾವಿಡ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡಿರುವ ದಹಾನಿ ಬಳಿಕ ಈ ಫೋಟೋ ಹಿಂದಿರುವ ಕಥೆಯನ್ನು ವಿವರಿಸಿದ್ದಾರೆ. "ಈ ಫೋಟೋ ಹಿಂದಿನ ಕಥೆ ಇಲ್ಲಿದೆ. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನ ಸಂದರ್ಭದಲ್ಲಿ ಮೆಲ್ಬರ್ನ್‌ನ ಹೋಟೆಲ್‌ವೊಂದರಲ್ಲಿ ನಾನು ಗೆಳೆಯರೊಂದಿಗೆ ಊಟ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಸರ್ ಕೂಡ ಅಲ್ಲಿಗೆ ಆಗಮಿಸಿದ್ದರು. ತಮ್ಮ ಸೀಟ್‌ಗೆ ತೆರಳುವ ಮುನ್ನವೇ ನನ್ನನ್ನು ನೋಡಿದ ಅವರು ನನ್ನ ಬಳಿಗೆ ಬಂದು ನಮ್ಮೆಲ್ಲರ ಜೊತೆಗೆ ಸಾಕಷ್ಟು ಗೌರವ ಹಾಗೂ ಪ್ರೀತಿಯನ್ನು ತೋರಿದರು"
ಆ ದಿನ ಅವರಿಂದ ನಾನು ಪಾಠ ಕಲಿತೆ
"ಸುಮ್ಮನೆ ಯೋಚಿಸಿ, ಎದುರಾಳಿ ತಂಡದ ಕೋಚ್, ವಾಲ್ ಆಫ್ ಕ್ರಿಕೆಟ್ ರಾಹುಲ್ ದ್ರಾವಿಡ್ ಅವರು ಸ್ವತಃ ನಿಮಗೆ ಹಾಗೂ ನಿಮ್ಮ ಗೆಳೆಯರಿಗೆ ಹೆಲೋ ಎಂದರೆ ಹೇಗಾಗಬಹುದು. ಆ ದಿನ ನಾನು ವಿನಮ್ರೆಯೇ ಯಶಸ್ಸಿನ ಸೂತ್ರ ಎಂಬುದನ್ನು ಅರಿತುಕೊಂಡೆ" ಎಂದು ಶೆಹ್ನವಾಜ್ ದಹಾನಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮೀಸಲು ಆಟಗಾರನಾಗಿದ್ದ ದಹಾನಿ
ಇನ್ನು ದಹಾನಿ ಈ ಹಿಂದೆ 2021ರ ಟಿ20 ವಿಶ್ವಕಪ್‌ನ ಸಂದರ್ಭದಲ್ಲಿ ತಂಡದ ಮೆಂಟರ್ ಆಗಿದ್ದ ಎಂಎಸ್ ಧೋನಿ ಅವರನ್ನು ಭೇಟಿಯಾಗಿದ್ದರು. ಬಳಿಕ ಧೋನಿ ಹುಟ್ಟುಹಬ್ಬದಂದು ಫೋಟೋ ಹಂಚಿಕೊಂಡು ಮತ್ತಷ್ಟು ಹೆಚ್ಚು ಕ್ರಿಕೆಟ್ ಆಡುತ್ತಾ ವಿಶ್ವದಾದ್ಯಂತ ಇರುವ ಅಭಿಮಾನಿಗಳನ್ನು ಮನರಂಜಿಸಿ ಎಂದು ಬರೆದುಕೊಂಡಿದ್ದರು.
ಪಾಕಿಸ್ತಾನದ ವೇಗದ ಬೌಲರ್ ಶಹ್ನವಾಜ್ ದಹಾನಿ ಕಳೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪ್ರಾಥಮಿಕ ಸ್ಕ್ವಾಡ್‌ನಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದರು. ಆದರೆ ಮೀಸಲು ಆಟಗಾರನಾಗಿ ಪಾಕ್ ತಂಡದ ಜೊತೆಗೆ ಪ್ರಯಾಣಿಸಿದ್ದರು. ಪಾಕ್ ಪರವಾಗಿ 2 ಏಕದಿನ, 11 ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ ಶಹ್ನವಾಜ್ ದಹಾನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications