
ಅಡಿಲೇಡ್, ಡಿಸೆಂಬರ್ 10: ಕ್ರಿಕೆಟ್ ಆಡುತ್ತಲೇ ಕಾಮೆಂಟರಿ ಮಾಡಿ ರಿಷಬ್ ಪಂತ್ ಎದುರಾಳಿಯನ್ನು ಗಲಿಬಿಲಿಗೊಳಿಸಿದ್ದಾರೆ. ಪಂತ್ ಕಾಮೆಂಟರಿಯ ಈ ಗಮ್ಮತ್ತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮವರನ್ನು ಹಲ್ಲು ಕಿಸಿಯಿಸುತ್ತಲೂ, ಆಸೀಸ್ ಆಟಗಾರರು ತಲೆ ಕೆರೆದುಕೊಳ್ಳುವಂತೆಯೂ ಮಾಡುತ್ತಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ (ಡಿಸೆಂಬರ್ 10) ವೇಳೆ ಈ ತಮಾಷೆಯ ಸಂಗತಿ ನಡೆದಿದೆ. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ ವೇಳೆ ಭಾರೀ ಜೋಶ್‌ನಲ್ಲಿದ್ದ ರಿಷಬ್ ಪಂತ್ ಕಾಮೆಂಟರಿ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಅಂತಿಮ ಇನ್ನಿಂಗ್ಸ್ ನಲ್ಲಿ ಆಸೀಸ್ 6 ವಿಕೆಟ್ ಕಳೆದು 161 ರನ್ ಪೇರಿಸಿತ್ತು. ಈ ವೇಳೆ 76ನೇ ಓವರ್ ಎಸೆಯಲು ಆರ್ ಅಶ್ವಿನ್ ಬಂದಿದ್ದರು. ಕ್ರೀಸ್‌ನಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಟಿಮ್ ಪೈನೆ ಇದ್ದರು. ಕಮಿನ್ಸ್ ಸ್ಟ್ರೈಕ್ ವೇಳೆ ಪಂತ್ ಕಾಮೆಂಟರಿ ಶುರು ಮಾಡಿದರು. ಬಹುಶಃ ಆಸೀಸ್ ಕ್ರಿಕೆಟ್ ಇತಿಹಾಸದಲ್ಲಿ ಪಂತ್, ಕಿರಿಕಿರಿಯ ಮೊದಲ ಕೀಪರ್ ಎನಿಸಿಕೊಂಡಿರಬೇಕು.
ಇಡೀ ಓವರ್ ಮುಗಿಯೋವರೆಗೂ ಪಂತ್ ಕಾಮೆಂಟ್ ನಿಲ್ಲಲಿಲ್ಲ. ಅತ್ತ ಕಾಮೆಂಟರಿ ಮಾಡೋಕೆ ಕುಂತಿದ್ದೋರು ಪಂತ್ ಜೋಶ್ ನೋಡಿ ಕಿಸಕ್ಕನೆ ನಕ್ಕರೆ, ಇತ್ತ ಬ್ಯಾಟಿಂಗ್ ಮಾಡುತ್ತಿದ್ದ ಪ್ಯಾಟ್, 'ಈತ ಕೀಪರೋ ಇಲ್ಲ ಕಾಮೆಂಟೇಟರೋ?!' ಅಂತ ಗಲಿಬಿಲಿಗೊಂಡು, ಮನಸ್ಸಿನಲ್ಲೇ ಅಂದುಕೊಂಡು ಆಡುತ್ತಿದ್ದರೇನೋ ಎನ್ನುವಂತಿದೆ ಈ ವಿಡಿಯೋ. ಅಂದ್ಹಾಗೆ ಈ ಪಂದ್ಯದಲ್ಲಿ ಕ್ಯಾಚ್‌ಗಾಗಿ ಪಂತ್ ವಿಶ್ವದಾಖಲೆ ನಿರ್ಮಿಸಿದ್ದಾರೆ.