ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಇತ್ತೀಚೆಗೆ ಸತತ ಟೀಕೆಗಳು ಎದುರಾಗುತ್ತಿದೆ. ತಂಡದ ಪ್ರದರ್ಶನ ಹಾಗೂ ಕೆಲ ನಿರ್ಧಾರಗಳ ಕುರಿತಾಗಿ ಕೆಲ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಕೋಚ್ ರಾಹುಲ್ ದ್ರಾವಿಡ್ ಮೇಲೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟಿಗರು ಕೂಡ ರಾಹುಲ್ ದ್ರಾವಿಡ್ ಕೋಚಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ.
ಇದೀಗ ಸ್ವತಃ ರಾಹುಲ್ ದ್ರಾವಿಡ್ ಅವರೊಂದಿಗೆ ತಂಡದಲ್ಲಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಆಟಗಾರ ಪಾರ್ಥಿವ್ ಪಟೇಲ್ ಕೂಡ ಈ ಬಗ್ಗೆ ಟೀಕೆಗಳನ್ನು ಮಾಡಿರುವುದು ಗಮನಾರ್ಹ. ರಾಹುಲ್ ದ್ರಾವಿಡ್ ಕೋಚ್ ಆಗಿ ಕ್ರೀಯಾಶೀಲ ಅಲ್ಲ ಎಂದು ಪಾರ್ಥಿವ್ ಪಟೇಲ್ ಹೇಳಿಕೆ ನಿಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಈ ಮಾತುಹೇಳಿದ್ದಾರೆ ಪಟೇಲ್.

ಮೈದಾನದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ವಿಭಾಗವನ್ನು ಬಳಸಿಕೊಳ್ಳುವಾಗ ಬಹಳ ಎಡವಟ್ಟುಗಳನ್ನು ಮಾಡುತ್ತಿದ್ದಾರೆ ಎಂದಿರುವ ಅವರು ಹಾರ್ದಿಕ್ ಪಾಂಡ್ಯಗೆ ಮೈದಾನದಲ್ಲಿ ಬೆಂಬಲ ಬೇಕಾಗಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪಾರ್ಥಿವ್ ಪಟೇಲ್ ಕೋಚ್ ದ್ರಾವಿಡ್ ವಿಚಾರವಾಗಿಯೂ ಮಾತನಾಡಿದ್ದಾರೆ.
"ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಅದ್ಭುವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲಿ ಅವರಿಗೆ ಕೋಚ್ ಆಶಿಶ್ ನೆಹ್ರಾ ಅವರ ಬೆಂಬಲ ಇತ್ತು. ಆದರೆ ರಾಹುಲ್ ದ್ರಾವಿಡ್ ಕೋಚ್ ಆಗಿ ಅಥ್ವಾ ವ್ಯಕ್ತಿಯಾಗಿ ಕ್ರಿಯಾಶೀಲವಲ್ಲ, ಅದು ಕೂಡ ಟಿ20ಮಾದರಿಯಲ್ಲಿ. ನನ್ನ ಪ್ರಕಾರ ಆ ಸ್ಥಾನಕ್ಕೆ ಓರ್ವ ಕ್ರಿಯಾಶೀಲ ವ್ಯಕ್ತಿಬೇಕು. ಹಾರ್ದಿಕ್ ಪಾಂಡ್ಯ ಅವರಲ್ಲಿ ಸಾಮರ್ಥ್ಯವಿದೆ. ಆದರೆ ಅವರಿಗೆ ಉತ್ತಮವಾದ ಬೆಂಬಲ ಬೇಕು. ಅದು ದ್ರಾವಿಡ್ ಅವರಿಂದ ನೀಡಲು ಸಾಧ್ಯವಾಗುತ್ತಿಲ್ಲ ಎನಿಸುತ್ತದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್.
ಇನ್ನು ಮತ್ತೊಂದೆಡೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೋಚ್ ದ್ರಾವಿಡ್ ಬೆಂಬಲಕ್ಕೆ ನಿಂತಿದ್ದಾರೆ. ಪಂದ್ಯ ಆರಂಭವಾದ ಬಳಿಕ ನಾಯಕನ ತೀರ್ಮಾನಗಳಿಗೆ ಕೋಚ್ ಹೊಣೆಯಾಗಲು ಸಾಧ್ಯವಿಲ್ಲ ಎಂದಿರುವ ಅವರು ಪ್ರತಿಯೊಂದಕ್ಕೂ ದ್ರಾವಿಡ್ ಅವರನ್ನೃ ಹೊಣೆಮಾಡುವುದನ್ನು ನಿಲ್ಲಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಪ್ರತಿಯೊಂದು ವಿಚಾರಕ್ಕೂ ರಾಹುಲ್ ದ್ರಾವಿಡ್ ಅವರನ್ನೇ ಬೊಟ್ಟು ಮಾಡುವುದನ್ನು ನಿಲ್ಲಿಸಿ. ಬೌಲರ್‌ಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ಅವರ ಪಾತ್ರ ಯಾವುದೂ ಇಲ್ಲ. ಅವರು ಮಾಧ್ಯಮಗಳ ಮುಂದೆ ಹೆಚ್ಚಾಗಿ ಮಾತನಾಡುವುದಿಲ್ಲ ಎನ್ನುವ ಕಾರಣಕ್ಕೆ ಸುಲಭವಾಗಿ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ" ಎಂದು ಟ್ವೀಟ್‌ನಲ್ಲಿ ದೊಡ್ಡ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಟಿ20 ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೋಲು ಅನುಭವಿಸಿದೆ. ಈ ಸಂದರ್ಭದಲ್ಲಿ ತಂಡದಲ್ಲಿ ಆಡುವ ಬಳಗದ ಆಯ್ಕೆ ವಿಚಾರವಾಗಿ ಹಾಗೂ ನಂತರ ಬೌಲರ್‌ಗಳ ಬದಲಾವಣೆ ವಿಚಾರವಾಗಿ ಹಾರ್ದಿಕ್ ಪಾಂಡ್ಯ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಮಡಗಳ ನಡುವಿನ ಟಿ20 ಸರಣಿಯ ಮೂರನೇ ಪಂದ್ಯ ಇಂದು ನಡೆಯಲಿದೆ. ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿರುವ ಕಾರಣ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ವೆಸ್ಟ್ ಇಂಡೀಸ್ ಈ ಪಂದ್ಯವನ್ನು ಗೆದ್ದರೆ ಐದು ಪಂದ್ಯಗಳ ಸರಣಿಯನ್ನು ಎರಡು ಪಂದ್ಯಗಳು ಬಾಕಿಯಿರುವಂತೆಯೇ ತನ್ನ ವಶಕ್ಕೆ ಪಡೆದಂತಾಗುತ್ತದೆ.