ಐಪಿಎಲ್ 16ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಳಪೆ ಆರಂಬವನ್ನು ಪಡೆದುಕೊಂಡಿದ್ದು ಮೂರು ಪಂದ್ಯಗಳ ಬಳಿಕ ಗೆಲುವಿನ ರುಚಿ ಕಂಡಿದೆ. ಆದರೆ ತಂಡದ ಪ್ರಮುಖ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿಯೂ ಆರಂಭಿಕ ಪಂದ್ಯಗಳಲ್ಲಿ ಮಿಂಚಲು ವಿಫಲವಾಗಿರುವುದು ಮ್ಯಾನೇಜ್‌ಮೆಂಟ್‌ಗೆ ಸವಾಲಾಗಿದೆ. ಆದರೆ ತಂಡದ ಓರ್ವ ಯುವ ಆಟಗಾರ ಮಾತ್ರ ಆರಂಭಿಕ ಪಂದ್ಯದಿಂದಲೂ ಅಬ್ಬರಿಸುತ್ತಿದ್ದು ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಅದು ಬೇರೆ ಯಾರೂ ಅಲ್ಲ ಮೂರನೇ ಕ್ರಮಾಂಕದ ಆಟಗಾರ ತಿಲಕ್ ವರ್ಮಾ.
ತಿಲಕ್ ವರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಈ ಯುವ ಆಟಗಾರ ತಿಲಕ್ ವರ್ಮಾ ಬಗ್ಗೆ ಪಾರ್ಥಿವ್ ಪಟೇಲ್ ವಿಶೇಷ ಮಾತುಗಳನ್ನಾಡಿದ್ದು ಈತ ಭವಿಷ್ಯದ ಆಟಗಾರ ಎಂದು ಬಣ್ಣಿಸಿದ್ದಾರೆ.

ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರವಾಗಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 73.50 ಸರಾಸರಿಯಲ್ಲಿ ಅವರು 158.06ರ ಸ್ಟ್ರೈಕ್‌ರೇಟ್‌ನಲ್ಲಿ 147 ರನ್‌ಗಳನ್ನು ಗಳಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 46 ಎಸೆತಗಳಲ್ಲಿ ಅಜೇಯ 84 ರನ್‌ಗಳನ್ನು ಗಳಿಸಿದರೆ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 22 ರನ್‌ಗಳನ್ನು ಗಳಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 41 ರನ್‌ಗಳನ್ನು ಗಳಿಸಿದ ತಿಲಕ್ ವರ್ಮಾ ತಂಡದ ಮೊದಲ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಜಿಯೋ ಸಿನಿಮಾ ಜೊತೆಗೆ ಪಾರ್ಥಿವ್ ಪಟೇಲ್ ಸಂವಾದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಶಯಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದು ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅವರ ಕಾಲ್ಚಲನೆ ಅದ್ಭುತವಾಗಿದ್ದು ಶೀಘ್ರವಾಗಿ ಪ್ರತಿಕ್ರಿಯಿಸುತ್ತಾರೆ. ಆಫ್ ಸ್ಪಿನ್ನರ್‌ಗಳಿಂದ ಅದ್ಭುತವಾಗಿ ಬೌಲಿಂಗ್ ದಾಳಿ ನಡೆಯುತ್ತರುವಾಗ ಸ್ಟ್ರೈಕ್ ಬದಲಾಯಿಸುವುದು ಸುಲಭವಲ್ಲ" ಎಂದಿದ್ದಾರೆ ಪಾರ್ಥಿವ್ ಪಟೇಲ್.
"ಪಂದ್ಯದಿಂದ ಪಂದ್ಯಕ್ಕೆ ಆತನ ಪ್ರಬುದ್ಧತೆಯನ್ನು ಗಮನಿಸಬಹುದು. ಅದುವೇ ಆತನ ಬಹಳ ದೊಡ್ಡ ಶಕ್ತಿ. ಮೊದಲಿಗೆ ನೀವು ಉತ್ತಮ ಪ್ರದರ್ಶನ ನೀಡಿ ಒಳ್ಳೆಯ ಆರಂಭ ಪಡೆಯಬಹುದು. ಆದರೆ ಬಳಿಕ ಎಲ್ಲರೂ ನಿಮ್ಮ ಆಡುವ ಶೈಲಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ನಿಮ್ಮಲ್ಲಿರು ಬಲ ದೌರ್ಬಲ್ಯಗಳನ್ನು ತಿಳಿದುಕೊಳ್ಳುತ್ತಾರೆ. ಆದರೆ ಮತ್ತೆ ಟೂರ್ನಿಗೆ ಉತ್ತಮವಾಗಿ ಕಮ್‌ಬ್ಯಾಕ್ ಮಾಡುವುದಕ್ಕಾಗಿ ಮೆಚ್ಚುಗೆ ಸೂಚಿಸಲೇಬೇಕು. ಇದು ಆಟಗಾರನ ಬದ್ಧತೆ ಹಾಗೂ ಪ್ರಬುದ್ಧತೆಯನ್ನು ತೋರ್ಪಡಿಸುತ್ತದೆ. ತಿಲಕ್ ವರ್ಮಾ ಭವಿಷ್ಯದ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ" ಎಂದಿದ್ದಾರೆ ಪಾರ್ಥಿವ್ ಪಟೇಲ್
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಪೈಪೋಟಿಯಿಮದ ಕೂಡಿದ್ದ ಈ ಪಂದ್ಯದಲ್ಲಿ ಮುಂಬೈ ಇಂಡಯನ್ಸ್ ತಂಡ ಹೋರಾಟದ ಪ್ರದರ್ಶನ ನೀಡಿದ್ದು ಪಂದ್ಯದ ನಾಂತಿಮ ಎಸೆತದಲ್ಲಿ ಗೆಲುವಿನ ನಗೆ ಬೀಡುವಲ್ಲಿ ಯಶಸ್ವಿಯಾಗಿದೆ. ಮುಂಬೈ ಇಂಡಿಯನ್ಸ್ ಪರವಾಗಿ ನಾಯಕ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿದ್ದು ಸುದೀರ್ಘ ಕಾಲದ ಬಳಿಕ ಫಾರ್ಮ್‌ಗೆ ಮರಳಿದ ಸೂಚನೆ ನೀಡಿದ್ದಾರೆ.