
ಕ್ಯಾಮರೂನ್ ಗ್ರೀನ್ ಬಗ್ಗೆ ಪ್ಯಾಟ್ ಕಮ್ಮಿನ್ಸ್ ಮಾತು
ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾ ತಂಡದ ಭವಿಷ್ಯದ ತಾರೆ ಎನಿಸಿಕೊಂಡಿರುವ ಆಟಗಾರ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಸಿಕ್ಕ ಅವಕಾಶದಲ್ಲಿ ತಾನೆಂಥಾ ಪ್ರತಿಭಾವಂತ ಆಟಗಾರ ಎಂಬುದನ್ನು ಈಗಾಗಲೇ ಗ್ರೀನ್ ಸಾಬೀತುಪಡಿಸಿದ್ದಾರೆ. ಕಳೆದ ಭಾರತ ಪ್ರವಾಸದಲ್ಲಿ ಡೇವಿಡ್ ವಾರ್ನರ್ ಬದಲಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಗ್ರೀನ್ ಎರಡು ಸ್ಪೋಟಕ ಅರ್ಧ ಶತಕ ಸಿಡಿಸಿ ಮಿಂಚಿದ್ದರು.

ಹರಾಜಿನಲ್ಲಿ ಗ್ರೀನ್ ಮೇಲೆ ಬಹುತೇಕ ಫ್ರಾಂಚೈಸಿಗಳ ಕಣ್ಣು
ಕ್ಯಾಮರೂನ್ ಗ್ರೀನ್ ಅವರ ಪವರ್ ಹಿಟ್ಟಿಂಗ್ ಸಾಮರ್ಥ್ಯ ಹಾಗೂ ಬೌಲಿಂಗ್‌ನಲ್ಲಿನ ವೇಗ ಐಪಿಎಲ್‌ನಂಥಾ ವೇದಿಕೆಯಲ್ಲಿ ಸಹಜವಾಗಿಯೇ ಸಾಕಷ್ಟು ಬೇಡಿಕೆಯನ್ನುಂಟು ಮಾಡುತ್ತದೆ. ಹೀಗಾಗಿ ಮುಂದಿನ ತಿಂಗಳು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗಾಗಿ ಕ್ಯಾಮರೂನ್ ಗ್ರೀನ್ ಹೆಸರು ನೊಂದಾಯಿಸಿದರೆ ಈ ಆಟಗಾರನ ಮೇಲೆ ಬಹುತೇಕ ತಂಡಗಳು ಪೈಪೋಟಿ ನಡೆಸುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಪ್ಯಾಟ್ ಕಮ್ಮಿನ್ಸ್ ಪ್ರತಿಕ್ರಿಯಿಸಿದ್ದಾರೆ.

ಆತನ ಶಕ್ತಿ ರಾಷ್ಟ್ರೀಯ ತಂಡಕ್ಕೆ ಮಾತ್ರವೇ ಇರಲಿ ಎಂದು ಬಯಸುತ್ತೇನೆ
ಇನ್ನು ಐಪಿಎಲ್‌ನಲ್ಲಿ ಕ್ಯಾಮರೂನ್ ಗ್ರೀನ್ ಭಾಗವಹಿಸುವ ಬಗ್ಗೆ ಪ್ಯಾಟ್ ಕಮ್ಮಿನ್ಸ್ ಮಾತನಾಡಿದ್ದು ಯುವ ಆಟಗಾರ ರಾಷ್ಟ್ರೀಯ ತಮಡದ ಕರ್ತವ್ಯದ ಮೇಲೆ ಹೆಚ್ಚು ಗಮನ ಹರಿಸಲಿ ಎಂದು ಬಯಸುವುದಾಗಿ ಹೇಳಿದ್ದಾರೆ. ನಾಯಕನಾಗಿ ತಾನು ಸವಾರ್ಥಿಯಾಗಿ ಯೋಚಿಸುತ್ತಿದ್ದು ಆತನ ಶಕ್ತಿ ರಾಷ್ಟ್ರೀಯ ತಂಡಕ್ಕೆ ಹೆಚ್ಚು ವ್ಯಯವಾಗುವುದನ್ನು ಬಯಸಿತ್ತೇನೆ ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.

ಇಂಥಾ ಅವಕಾಶವನ್ನು ಕಳೆದುಕೊಳ್ಳುವಂತೆ ಹೇಳಲು ಬಯಸಲಾರೆ
"ಐಪಿಎಲ್ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಭಾಗವಹಿಸುವ ಸಾಧ್ಯತೆಯಿದೆ. ಹರಾಜಿಗಾಗಿ ಇನ್ನು ಕೆಲ ದಿನಗಳು ಇರುವುದರಿಂದ ಏನಾಗಲಿದೆ ಎಂಬುದನ್ನು ಕಾದು ನೋಡೋಣ. ನಾಯಕನ ಸ್ವಾರ್ಥದಿಂದ ನಾನು ಆತನ ಎಲ್ಲಾ ಶಕ್ತಿಯನ್ನು ಆಸ್ಟ್ರೇಲಿಯಾ ಪರವಾಗಿ ವ್ಯಯಿಸುವುದನ್ನು ಬಯಸುತ್ತೇನೆ. ಆದರೆ ಇಂಥಾ ಅವಕಾಶ ಸಿಕ್ಕಾಗ ಅದನ್ನು ಕಳೆದುಕೊಳ್ಳುವಂತೆ ಹೇಳುವುದಕ್ಕೆ ಹೇಗೆ ಸಾಧ್ಯ?" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್.

ಮುಂದಿನ ಐಪಿಎಲ್‌ನಿಂದ ಪ್ಯಾಟ್ ಕಮ್ಮಿನ್ಸ್ ಹೊರಕ್ಕೆ
ಇನ್ನು ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಪ್ಯಾಟ್ ಕಮ್ಮಿನ್ಸ್ ಈ ಬಾರಿ ಕೆಕೆಆರ್ ತಂಡದಿಂದ ಬಿಡುಗಡೆಯಾಗಿದ್ದರು. ಬಳಿಕ ಪ್ಯಾಟ್ ಕಮ್ಮಿನ್ಸ್ ಮುಂದಿನ ಐಪಿಎಲ್‌ನಿಂದ ತಾನು ಹೊರಗುಳಿಯುತ್ತಿರುವುದಾಗಿಯೂ ಘೋಷಿಸಿದ್ದಾರೆ. ರಾಷ್ಟ್ರೀಯ ತಂಡದ ಕರ್ತವ್ಯದ ಕಾರಣಕ್ಕಾಗಿ ಪ್ಯಾಟ್ ಕಮ್ಮಿನ್ಸ್ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿದ್ದ ಪ್ಯಾಟ್ ಕಮ್ಮಿನ್ಸ್ ಈಗ ಟಿ20 ತಂಡದ ನಾಯಕತ್ವ ಕೂಡ ವಹಿಸಿಕೊಂಡಿದ್ದಾರೆ.


Click it and Unblock the Notifications












