ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಈ ಟೂರ್ನಿಗೂ ಭರದ ಸಿದ್ಧತೆಗಳು ನಡೆದಿವೆ. ಹಲವು ದೇಶಗಳು ಈ ಟೂರ್ನಿಗೆ ಭರ್ಜರಿ ಅಭ್ಯಾಸವನ್ನು ನಡೆಸಿವೆ. ಇನ್ನು ಹಲವು ತಂಡಗಳಿಗೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಭಾರತಕ್ಕೂ ಈ ಗಾಯದ ಚಿಂತೆ ಹೆಚ್ಚಿದೆ. ಇನ್ನು ಆಸ್ಟ್ರೇಲಿಯಾ ತಂಡಕ್ಕೂ ಗಾಯ ಬಹುವಾಗಿ ಕಾಡುತ್ತಿದೆ. ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಟಿ20 ವಿಶ್ವಕಪ್ 2026ರ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಇವರು ಪಾಕಿಸ್ತಾನ ವಿರುದ್ಧ ನಡೆಯಲಿರುವ ಟಿ20 ಸರಣಿಯ ಭಾಗವಾಗಿಲ್ಲ.
ಆಸ್ಟ್ರೇಲಿಯಾ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಸ್ಟಾರ್ ಆಟಗಾರರು ಸೇರಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಟಿಮ್ ಡೇವಿಡ್ ಸಹ ಗಾಯಾಳುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗಾಗಲೇ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಸ್ಥಾನ ಪಡೆದಿರುವ ಟೀಮ್ ಡೇವಿಡ್ ಶೀಘ್ರದಲ್ಲಿ ಫಿಟ್ ಆಗಲಿದ್ದಾರೆ ಎಂದು ಆಸ್ಟ್ರೇಲಿಯಾದ ಮುಖ್ಯ ಆಯ್ಕೆದಾರ ಜಾರ್ಜ್ ಬೈಲಿ ತಿಳಿಸಿದ್ದಾರೆ. ಇನ್ನು ಕಮಿನ್ಸ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ಧ ಸರಣಿಯನ್ನು ಆಡಲಿದೆ. ಈ ಸರಣಿಯಿಂದ ಪ್ಯಾಟ್ ಕಮಿನ್ಸ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಟಿ20 ವಿಶ್ವಕಪ್‌ನಲ್ಲಿ ಆಸೀಸ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಫೆ.11 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಫೆ. 13ರಿಂದ ಜಿಂಬಾಬ್ವೆ ವಿರುದ್ಧ ಆಸೀಸ್ ಕಣಕ್ಕೆ ಇಳಿಯಲಿದ್ದು, ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ತಂಡದ ಭಾಗವಗಲಿದ್ದಾರೆ. ಆಸೀಸ್ ಲೀಗ್ ಹಂತದ ಕೊನೆಯ ಪಂದ್ಯವನ್ನು ಫೆ.16 ರಂದು ಶ್ರೀಲಂಕಾ ವಿರುದ್ಧ ಆಡಲಿದೆ. ಆಸೀಸ್ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಲಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಆಷಸ್ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ಗಾಯದ ಸಮಸ್ಯೆಯಿಂದ ನಾಲ್ಕು ಪಂದ್ಯಗಳಲ್ಲಿ ಆಡಿರಲಿಲ್ಲ. ಇವರು ಮೂರನೇ ಪಂದ್ಯದಲ್ಲಿ ಮಾತ್ರ ಆಡಿದ್ದರು. ಸರಾಣಿಯಲ್ಲಿ ಉಳಿದ ಪಂದ್ಯಗಳನ್ನು ಸ್ಟೀವನ್ ಸ್ಮಿತ್ ಮುನ್ನಡೆಸಿದ್ದರು. ಈ ಸರಣಿಯಲ್ಲಿ ಆಷಸ್ 4-1 ರಿಂದ ಗೆದ್ದು ಬೀಗಿತ್ತು.
ಟಿ20 ವಿಶ್ವಕಪ್‌ಗೆ ಈಗಾಗಲೇ ಎಲ್ಲ ತಂಡಗಳು ಪ್ರಕಟಿಸಿವೆ. ಆದರೆ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಐಸಿಸಿ ಜನವರಿ 31ರ ವರೆಗೆ ಅವಕಾಶ ನೀಡಿದೆ. ಪಾಕ್ ವಿರುದ್ಧ ಆಸ್ಟ್ರೇಲಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.