
ಆಶಸ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಭಾರೀ ಹಿನ್ನೆಡೆಯನ್ನು ಅನುಭವಿಸುತ್ತಿದೆ. ಈ ಸರಣಿಯಲ್ಲಿ ವಾಪಾಸಾಗುವುದು ಇಂಗ್ಲೆಂಡ್ ಪಾಲಿಗೆ ಬಹುತೇಕ ಅಸಾಧ್ಯ. ಈ ಮಧ್ಯೆ ಇಂಗ್ಲೆಂಡ್ ತಂಡದ ಮುಂದಿನ ಪ್ರವಾಸದ ಬಗ್ಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಈ ಸರಣಿಯ ಬಳಿಕ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದ್ದು ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪಾಲ್ ಕಾಲಿಂಗ್‌ವುಡ್ ಅವರನ್ನು ಹೆಡ್ ಕೋಚ್ ಆಗಿ ನೇಮಿಸಿದೆ.
ಇಂಗ್ಲೆಂಡ್ ತಂಡದ ಹೆಡ್ ಕೋಚ್ ಆಗಿರುವ ಕ್ರಿಸ್ ಸಿಲ್ವರ್‌ವುಡ್ ಈ ಸರಣಿಯ ಸಂದರ್ಭದಲ್ಲಿ ಬ್ರೇಕ್ ಪಡೆಯಲು ಬಯಸಿದ್ದಾರೆ. ಹೀಗಾಗಿ ಪಾಲ್ ಕಾಲಿಂಗ್‌ವುಡ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಸಿಲ್ವರ್‌ವುಡ್ ಸದ್ಯ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಈ ಸರಣಿಯ ಮುಕ್ತಾಯದ ಬಳಿಕ ಅವರು ವಿಶ್ರಾಂತಿಯನ್ನು ಪಡೆದುಕೊಳ್ಳಲಿದ್ದಾರೆ.
ಇಂಗ್ಲೆಂಡ್ ತಂಡ ಜನವರಿ 22ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದೆ. ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿರುವ ಪಾಲ್ ಕಾಲಿಂಗ್‌ವುಡ್ ಈ ಸರಣಿಯಲ್ಲಿ ಮುಖಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇನ್ನು ಈ ಕೆರಿಬಿಯನ್ ಪ್ರವಾಸದ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ಆರಂಭಿಕ ಆಟಗಾರ ಮಾರ್ಕಸ್ ಟ್ರಸ್ಕೋತಿಕ್ ಪಾಲ್ ಕಾಲಿಂಗ್‌ವುಡ್ ಅವರಿಗೆ ಸಹಾಯಕ ಕೋಚ್ ಆಗಿ ಸಾಥ್ ನೀಡಲಿದ್ದಾರೆ. ಪಾಲ್ ಕಾಲಿಂಗ್‌ವುಡ್ ಕಳೆದ ಟಿ20 ವಿಶ್ವಕಪ್ ಸಂದರ್ಭದಲ್ಲಿಯೂ ಇಂಗ್ಲೆಂಡ್ ತಂಡದ ಜೊತೆಗಿದ್ದರು. ಆದರೆ ಆಶಸ್ ಸರಣಿಗೆ ತೆರಳುವ ಮುನ್ನ ಅವರು ತವರಿಗೆ ವಾಪಾಸಾಗಿದ್ದಾರೆ.
ಇನ್ನು ವೆಸ್ಟ್ ಇಂಡೀಸ್‌ಗೆ ತೆರಳಲಿರುವ 16 ಸದಸ್ಯರ ಇಂಗ್ಲೆಂಡ್ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸಲಿದ್ದಾರೆ. ಈ ತಂಡ ಕಳೆದ ನವೆಂಬರ್‌ನಲ್ಲಿ ಯುಎಇನಲ್ಲಿ ಅಂತ್ಯವಾದ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಿದ್ದ 11 ಸದಸ್ಯರನ್ನು ಒಳಗೊಂಡಿದೆ. ಜಾರ್ಜ್ ಗಾರ್ಟನ್ ಹಾಗೂ ಡೇವಿಡ್ ಪೈನ್ ಇಂಗ್ಲೆಂಡ್ ತಂಡದಿಮದ ಮೊದಲ ಬಾರಿಗೆ ಕರೆಯನ್ನು ಸ್ವೀಕರಿಸಿದ್ದಾರೆ.
ಈ ತಂಡದ ಆಯ್ಕೆಯ ಹಿನ್ನೆಲೆಯಲ್ಲಿ ಪಾಲ್ ಕಾಲಿಂಗ್‌ವುಡ್ ಪ್ರತಿಕ್ರಿಯೆ ನೀಡಿದ್ದಾರೆ. "ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುನ್ನ ನಾವು ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ. ಹೀಗಾಗಿ ನಾವು ಕೆಲ ಪ್ರಬಲ ಬ್ಯಾಟಿಂಗ್ ಮತ್ತು ಸಮತೋಲಿತ ದಾಳಿಯನ್ನು ಹೊಂದಿರುವ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದೇವೆ ಎಂದು ಕಾಲಿಂಗ್‌ವುಡ್ ಹೇಳಿದರು. ಮುಂದುವರಿದು ಮಾತನಾಡಿದ ಅವರು "ವಿಶ್ವಕಪ್‌ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯವಿದೆ. ಆಶಸ್ ತಂಡದಲ್ಲಿರುವ ಆಟಗಾರರ ಅನುಪಸ್ಥಿತಿಯಲ್ಲಿ ಈ ತಂಡಕ್ಕೆ ಹೆಚ್ಚಿನ ಅವಕಾಶಗಳಿವೆ" ಎಂದಿದ್ದಾರೆ.
ಇಂಗ್ಲೆಂಡ್ ಟಿ20 ತಂಡ: ಇಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಟಾಮ್ ಬ್ಯಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಡಾಸನ್, ಜಾರ್ಜ್ ಗಾರ್ಟನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಸಾಕಿಬ್ ಮಹಮೂದ್, ಟೈಮಲ್ ಮಿಲ್ಸ್, ಡೇವಿಡ್ ಪೇನ್, ಆದಿಲ್ ರಶೀದ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಜೇಮ್ಸ್ ವಿನ್ಸ್.