Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಭಾರತಕ್ಕೆ ಬರುವ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಪಂಜಾಬ್ ಸ್ಫೋಟಕ ಆಲ್‌ರೌಂಡರ್

ಐಪಿಎಲ್ 2023ರ ಆವೃತ್ತಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ತಂಡದ ಪ್ರಮುಖ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಇಂಗ್ಲೆಂಡ್‌ನಲ್ಲಿರುವ ಅವರು ಇನ್ನೆರಡು ದಿನಗಳಲ್ಲಿ ಭಾರತಕ್ಕೆ ಬರುವುದಾಗಿ ಹೇಳಿದ್ದು, ಆದಷ್ಟು ಬೇಗನೆ ತಂಡವನ್ನು ಸೇರಿಕೊಳ್ಳುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊಣಕಾಲು ನೋವಿನಿಂದ ಬಳಲುತ್ತಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗೆ ನಿರಾಪೇಕ್ಷೇಣ ಪತ್ರ (ಎನ್‌ಒಸಿ) ನೀಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಡ ಮಾಡುತ್ತಿತ್ತು. ಇದರಿಂದಾಗಿ ಅವರು ಐಪಿಎಲ್‌ನಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಮೊಣಕಾಲು ನೋವಿಗೆ ತೆಗೆದುಕೊಂಡಿರುವ ಔಷಧಿಯು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಮುಂದಿನ ಎರಡು ದಿನಗಳಲ್ಲಿ ಭಾರತಕ್ಕೆ ಪ್ರಯಾಣ ಮಾಡುವುದಾಗಿ ಹೇಳಿದ್ದಾರೆ.

 Liam Livingstone

ಪ್ರಮುಖ ಆಲ್‌ರೌಂಡರ್ ಅನುಪಸ್ಥಿತಿಯಲ್ಲಿಯೇ ಪಂಜಾಬ್ ಕಿಂಗ್ಸ್ ಆಡಿದ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಲು ಸಜ್ಜಾಗಿದ್ದು, ಮೂರನೇ ಜಯಕ್ಕಾಗಿ ಎದುರು ನೋಡುತ್ತಿದೆ. ಇಂಗ್ಲೆಂಡ್‌ನಲ್ಲಿದ್ದರೂ ಲಿವಿಂಗ್‌ಸ್ಟೋನ್ ತನ್ನ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಮ್ಮೆ ಅವರು ತಂಡವನ್ನು ಸೇರಿಕೊಂಡರೆ ಪಂಜಾಬ್ ಕಿಂಗ್ಸ್ ಮತ್ತಷ್ಟು ಅಪಾಯಕಾರಿ ತಂಡವಾಗಲಿದೆ.

ಇನ್ನೆರಡು ದಿನಗಳಲ್ಲಿ ಭಾರತಕ್ಕೆ ಹೊರಡುತ್ತೇನೆ

ಟ್ವಿಟ್ಟರ್‌ನಲ್ಲಿ ಲಂಕಾಶೈರ್ ಕ್ರಿಕೆಟ್ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಮಾತನಾಡಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಐಪಿಎಲ್‌ನಲ್ಲಿ ಭಾಗವಹಿಸುವ ಕುರಿತು ಈ ಮಾಹಿತಿ ನೀಡಿದರು. "ಕಳೆದ ವಾರ ನಾನು ಚುಚ್ಚುಮದ್ದನ್ನು ತೆಗೆದುಕೊಂಡಿದ್ದೇನೆ ಅದು ಮ್ಯಾಜಿಕ್‌ನಂತೆ ಕೆಲಸ ಮಾಡಿದೆ. ಆದ್ದರಿಂದ ಮುಂದಿನ 48 ಗಂಟೆಗಳಲ್ಲಿ ನಾನು ಭಾರತಕ್ಕೆ ಹೊರಡಲಿದ್ದೇನೆ ಎಂದು ಆಶಿಸುತ್ತೇನೆ. ಐಪಿಎಲ್‌ಗೆ ಹೊರಡುವುದು ತಡವಾಯಿತು, ಆದರೆ ಅಂತಿಮವಾಗಿ ಕೊನೆಯ ಭರವಸೆ ಕಾಣಿಸಿತು" ಎಂದು ಹೇಳಿದರು.

 Liam Livingstone

29 ವರ್ಷದ ಸ್ಫೋಟಕ ಆಲ್‌ರೌಂಡರ್ ಪಂಜಾಬ್ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ಅವರಿಗೆ 11.50 ಕೋಟಿ ರುಪಾಯಿ ನೀಡಿ ಪಂಜಾಬ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ದುಬಾರಿ ಮೊತ್ತ ಪಡೆದರೂ ಅದಕ್ಕೆ ತಕ್ಕಂತೆ ಕಳೆದ ಬಾರಿ ಪ್ರದರ್ಶನ ನೀಡಿದರು. ಆಡಿದ 14 ಪಂದ್ಯಗಳಲ್ಲಿ 182.08 ಸ್ಟ್ರೈಕ್‌ರೇಟ್‌ನಲ್ಲಿ 437 ರನ್ ಗಳಿಸಿದರು. ಕಳೆದ ಆವೃತ್ತಿಯಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದರು. 2022ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಡಿದ ಬಳಿಕ ಅವರು ಮೊಣಕಾಲಿನ ಗಾಯಕ್ಕೆ ತುತ್ತಾದ ಕಾರಣ ಅಂದಿನಿಂದ ಯಾವುದೇ ಕ್ರಿಕೆಟ್ ಆಡಿರಲಿಲ್ಲ.

ಪಂಜಾಬ್ ತಂಡ ಸೇರಿಕೊಂಡ ರಬಾಡ

ತಂಡದ ಮತ್ತೊಬ್ಬ ಪ್ರಮುಖ ಬೌಲರ್ ಕಗಿಸೊ ರಬಾಡ ತಂಡವನ್ನು ಸೇರಿಕೊಂಡಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ತಂದುಕೊಟ್ಟಿದೆ. ಐಪಿಎಲ್‌ ಇತಿಹಾಸದ ದುಬಾರಿ ಆಟಗಾರ ಸ್ಯಾಮ್ ಕರನ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಬಾಡ, ಅರ್ಷದೀಪ್ ಸಿಂಗ್, ಸ್ಯಾಮ್ ಕರನ್ ಮೂವರು ವೇಗಿಗಳು ಆಡಿದರೆ ಯಾವುದೇ ಬಲಿಷ್ಠ ತಂಡವನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ಸಿಕಂದರ್ ರಾಜಾ ಬದಲಾಗಿ ಕಗಿಸೊ ರಬಾಡಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಲಿವಿಂಗ್‌ಸ್ಟೋನ್ ಬಂದರೆ ಭಾನುಕಾ ರಾಜಪಕ್ಸ ಬದಲಾಗಿ ಪ್ಲೇಯಿಂಗ್‌ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಏಪ್ರಿಲ್ 13ರಂದು ಪಂಜಾಬ್ ಕಿಂಗ್ಸ್ ತವರಿನ ಅಂಗಳದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯಕ್ಕೆ ಲಿವಿಂಗ್‌ಸ್ಟೋನ್ ಲಭ್ಯವಾಗುವ ಸಾಧ್ಯತೆ ಇದೆ.

Story first published: Sunday, April 9, 2023, 17:50 [IST]
Other articles published on Apr 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+