ಒಂದು ಬಾರಿ ತಪ್ಪು ಮಾಡಿದಾಗ ಮನುಷ್ಯ ಅದರಿಂದ ಪಾಠ ಕಲಿತು ಜೀವನದಲ್ಲಿ ಮುಂದೆ ಸಾಗುತ್ತಾನೆ. ಆದರೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾಡಿದ ತಪ್ಪಿನಿಂದ ಪಾಠ ಕಲಿಯದೇ ಪದೇ ಪದೇ ಅದೇ ತಪ್ಪನ್ನು ಮಾಡುತ್ತಾ ಸಾಗಿದ್ದಾರೆ. ಹೀಗಾಗಿ ಪಂಜಾಬ್ ಕ್ಯಾಂಪ್‌ನಲ್ಲಿ ಇರಬೇಕಿದ್ದ ಗೆಲುವಿನ ಜೋಶ್‌ಗೆ ಪೆಟ್ಟು ಬಿದ್ದಿದೆ. ಹಾಗಿದ್ದರೆ ಶ್ರೇಯಸ್ ಅಯ್ಯರ್ ಮಾಡಿದ ಆ ತಪ್ಪು ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಶುಕ್ರವಾರ ಚೆನ್ನೈನ ಚೆಪಾಕ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಬಿಗ್ ಫೈಟ್ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಫೀಲ್ಡಿಂಗ್ ಮಾಡಿತು. ಶ್ರೇಯಸ್ ಅಯ್ಯರ್ ಅವರ ಪಡೆ ಚೆನ್ನೈ ತಂಡವನ್ನು 209 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಸಫಲವಾಯಿತು. ಆದರೆ ನಿಗದಿತ ಸಮಯದಲ್ಲಿ ಬೌಲಿಂಗ್ ಮುಗಿಸದೆ ಇರುವುದಕ್ಕೆ ದಂಡನೆಗೆ ಗುರಿಯಾಗಿದೆ. ಈ ಬಾರಿ ಬರೀ ಶ್ರೇಯಸ್ ಅಯ್ಯರ್ ಅವರಿಗೆ ಅಷ್ಟೇ ಅಲ್ಲ ಇಡೀ ತಂಡ ಇದರಿಂದ ತೊಂದರೆಗೆ ಈಡಾಗಿದೆ.

ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ ಮಾಡುವ ವೇಳೆ 18 ಓವರ್‌ಗಳ ಬಳಿಕ ಬೌಂಡರಿ ಲೈನ್‌ನಿಂದ ಇನ್ನೊಬ್ಬ ಫೀಲ್ಡರ್ ಅವರನ್ನು 30 ಯಾರ್ಡ್ ಸರ್ಕಲ್‌ನಲ್ಲಿ ನಿಲ್ಲಲು ಸೂಚಿಸಲಾಯಿತು. ಕಾರಣ ಪಂಜಾಬ್ ನಿಗದಿತ ಅವಧಿ ಮೀರಿ ಬೌಲಿಂಗ್ ನಡೆಸಲು ಸಮಯವನ್ನು ತೆಗೆದುಕೊಂಡಿತು. ಅದಕ್ಕಾಗಿಯೇ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಭಾರಿ ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಇಡೀ ಪ್ಲೇಯಿಂಗ್ XI ತಂಡಕ್ಕೆ ನಿಧಾನಗತಿಯ ಓವರ್ ದರ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ಇದು ಪಂಜಾಬ್ ತಂಡದ ಈ ಋತುವಿನ ಎರಡನೇ ನಿಧಾನಗತಿಯ ಬೌಲಿಂಗ್ ಆಗಿದ್ದು, ಪರಿಣಾಮವಾಗಿ ನಾಯಕ ಶ್ರೇಯಸ್ ಅಯ್ಯರ್‌ಗೆ 24 ಲಕ್ಷ ದಂಡ, ಮತ್ತು ಪ್ರತಿ ಆಟಗಾರರಿಗೆ ಪಂದ್ಯದ ಶುಲ್ಕದ ಶೇಕಡಾ 25 ದಂಡ ವಿಧಿಸಲಾಗಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಈ ಋತುವಿನಲ್ಲಿ ಪಂಜಾಬ್ ನಿಧಾನಗತಿಯ ಓವರ್ ರೇಟ್ ಉಲ್ಲಂಘನೆಯನ್ನು ಮತ್ತೊಮ್ಮೆ ಮಾಡಿದಲ್ಲಿ ಅಯ್ಯರ್ ಅವರು ಒಂದು ಪಂದ್ಯದಿಂದ ದೂರ ಉಳಿಯಬೇಕಾಗುತ್ತದೆ. ಮತ್ತು ಅವರಿಗೆ 30 ಲಕ್ಷ ದಂಡ ವಿಧಿಸಲಾಗುವುದು.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209 ರನ್ ಕಲೆ ಹಾಕಿತು. ಚೆನ್ನೈ ಪರ ಆಯುಷ್ ಮಾತ್ರೆ ಅರ್ಧಶತಕ ಬಾರಿಸಿದರೆ, ಶಿವಂ ದುಬೆ, ಸರ್ಫರಾಜ್ ಖಾನ್ ಸಮಯೋಚಿತ ಆಟವಾಡಿ ತಂಡಕ್ಕೆ ಆಧಾರವಾದರು. ಇನ್ನು ಸವಾಲಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಪರ ನಾಯಕ ಶ್ರೇಯಸ್ ಅಯ್ಯರ್ ಬಾರಿಸಿದ ಅರ್ಧಶತಕ ಹಾಗೂ ಪ್ರಿಯಾಂಶ್ ಆರ್ಯ ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್ ಸೇರಿಸಿ ಜಯ ಸಾಧಿಸಿತು. ಪಂಜಾಬ್ ಈ ಋತುವಿನಲ್ಲಿ ದಾಖಲಿಸಿದ ಎರಡನೇ ಗೆಲುವು ಇದಾಗಿದೆ.