ಸಂಘಟಿತ ಆಟದ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ 37 ರನ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಶ್ರೇಯಸ್ ಪಡೆ ಎರಡು ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಭಾನುವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 236 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 199 ರನ್ ಸೇರಿಸಿ ಸೋಲು ಕಂಡಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇ ಆಫ್ ಆಸೆ ಮುಂದಿನ ಪಂದ್ಯಗಳಿಗೆ ಶಿಫ್ಟ್ ಆಗಿದೆ. ಲಕ್ನೋ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.

ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಲಕ್ನೋ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರರಾದ ಐಡೇನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೋರನ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಿಷಭ್ ಪಂತ್ (18) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ (11) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆರನೇ ವಿಕೆಟ್‌ಗೆ ಆಯುಷ್ ಬದೋನಿ ಹಾಗೂ ಅಬ್ದುಲ್ ಸಮದ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೊಡಿ ಆಡುತ್ತಿದ್ದಾಗ ಎಲ್‌ಎಸ್‌ಜಿ ಗೆಲುವು ದಾಖಲಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಜೋಡಿ ತಂಡಕ್ಕೆ ಅಗತ್ಯ ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಬ್ದುಲ್, ಬದೋನಿ ಆರನೇ ವಿಕೆಟ್‌ಗೆ 41 ಎಸೆತಗಳಲ್ಲಿ 81 ರನ್ ಸಿಡಿಸಿತು. ಅಬ್ದುಲ್ ಸಮದ್ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಆಯುಷ್ ಬದೋನಿ 40 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿ ಔಟ್ ಆದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭಿಕ ಪ್ರಿಯಾಂಶ್ ಆರ್ಯ ಸಿಂಗಲ್ ಡಿಜಿಟನ್‌ನಲ್ಲಿ ಆಟ ಮುಗಿಸಿದರು. ಪ್ರಭಸಿಮ್ರಾನ್ ಸಿಂಗ್ ಹಾಗೂ ಜೋಶ್ ಇಂಗ್ಲೀಷ್ ಜೋಡಿ ಅಬರದ ಆಟವನ್ನು ಆಡಿತು. ಈ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆರಂಭಿಸಿ, 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಜೋಶ್ ಇಂಗ್ಲೀಷ್ 14 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿ ಔಟ್ ಆದರು.
ಮೂರನೇ ವಿಕೆಟ್‌ಗೆ ಪ್ರಭಸಿಮ್ರಾನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಲಕ್ನೋ ತಂಡ ವಿಫಲವಾಯಿತು. ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡ ಜೋಡಿ, ರನ್ ವೇಗಕ್ಕೂ ಚುರುಕು ಮುಟ್ಟಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ದಿಗ್ವೇಶ್ ರಾಠಿ ಸಫಲರಾದರು. ಈ ಜೋಡಿ 47 ಎಸೆತಗಳಲ್ಲಿ 78 ರನ್ ಕಾಣಿಕೆ ನೀಡಿತು. ಶ್ರೇಯಸ್ ಅಯ್ಯರ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ನೇಹಾಲ್ ವಧೇರಾ (16) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಐದನೇ ವಿಕೆಟ್‌ಗೆ ಪ್ರಭಸಿಮ್ರಾನ್ ಸಿಂಗ್ ಹಾಗೂ ಶಶಾಂಕ್ ಸಿಂಗ್ ಜೋಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿತು. ಈ ಜೋಡಿ 21 ಎಸೆತಗಳಲ್ಲಿ 54 ರನ್ ಸಿಡಿಸಿತು. ಈ ವೇಳೆ ಪ್ರಭಸಿಮ್ರಾನ್ ಸಿಂಗ್ 6 ಬೌಂಡರಿ, 7 ಸಿಕ್ಸರ್ ಸಹಾಯದಿಂದ 91 ರನ್ ಸಿಡಿಸಿ ಔಟ್ ಆದರು. ಇವರ ಅಮೋಘ ಇನಿಂಗ್ಸ್ ನೆರವಿನಿಂದಲೇ ಪಂಜಾಬ್ ಸವಾಲಿನ ಮೊತ್ತವನ್ನು ಕಲೆ ಹಾಕಿತು.
ಶಶಾಂಕ್ ಸಿಂಗ್ 15 ಎಸೆತಗಳಲ್ಲಿ ಅಜೇಯ 33 ರನ್ ಸಿಡಿಸಿದರು. ಇನ್ನು ಮಾರ್ಕೋ ಸ್ಟೋಯಿನಿಸ್ ಅಜೇಯ 15 ರನ್ ಬಾರಿಸಿದರು. ಎಲ್‌ಎಸ್‌ಜಿ ಪರ ಆಕಾಶ್ ಸಿಂಗ್, ದಿಗ್ವೇಶ್ ರಾಠಿ ತಲಾ ಎರಡು ವಿಕೆಟ್ ಕಬಳಿಸಿದರು.