ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೂರನೇ ಗೆಲುವು ಸಾಧಿಸಿದೆ. ಪಂಜಾಬ್ ಕಿಂಗ್ಸ್ ತಂಡದ ತವರಿನಲ್ಲಿ ಪಂದ್ಯ ನಡೆದಿದ್ದರೂ ಆರ್‌ಸಿಬಿ ತಂಡ ಎಲ್ಲಾ ವಿಭಾಗದಲ್ಲಿಯೂ ಸರ್ವಾಂಗೀಣ ಪ್ರದರ್ಶನ ನೀಡಿದ್ದು ಸ್ಮರಣೀಯ ಗೆಲುವು ಸಾಧಿಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿಯೂ ಗಮನಾರ್ಹ ಏರಿಕೆ ಕಂಡಿದೆ.
ಇನ್ನು ಈ ಬಾರಿಯ ಆವೃತ್ತಿಯಲ್ಲಿ ತವರಿನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಸೋಲು ಕಂಡ ಕಾರಣ ಆರ್‌ಸಿಬಿ ತಂಡ ಹಿನ್ನಡೆಗೆ ಒಳಗಾಗಿತ್ತು. ಈ ಸಂದರ್ಭದಲ್ಲಿ ತವರಿನಾಚೆ ನಡೆದ ಈ ಪಂದ್ಯದ ಗೆಲುವು ಆರ್‌ಸಿಬಿ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ಪಂಜಾಗ್ ಕಿಂಗ್ಸ್ ತಂಡದ ವಿರುದ್ಧ ಸಾಧಿಸಿದ ಈ ಗೆಲುವಿಗೆ ಮುಖ್ಯ ಕಾರಣವಾಗಿದ್ದು ಈ ಮೂರು ಅಂಶಗಳು ಅವು ಯಾವುದು? ಅದರ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಆರ್‌ಸಿಬಿ ತಂಡ ಟಾಸ್ ಸೋತರು ಈ ಪಂದ್ಯದಲ್ಲಿ ಮೊದಲ ಸರದಿಯಲ್ಲಿ ಬ್ಯಾಟಿಂಗ್ ನಡೆಸಿದಾದ ಪವರ್‌ಪ್ಲೇನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದೆ. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ ಫಿಲ್ಡಿಂಗ್ ನಿರ್ಬಂಧವನ್ನು ಅದ್ಭುತವಾಗಿ ಬಳಸಿಕೊಂಡಿದ್ದು ತಂಡಕ್ಕೆ ಯಶಸ್ಸು ತಂದುಕೊಟ್ಟರು. ಈ ಅವಧಿಯಲ್ಲಿ ಆರ್‌ಸಿಬಿ ಬಹುತೇಕ 10ರ ಸರಾಸರಿಯಲ್ಲಿ ರನ್‌ಗಳಿಸಿತ್ತು. 10ನೇ ಓವರ್‌ನ ಅಂತ್ಯದಲ್ಲಿಯೂ ಆರ್‌ಸಿಬಿ ರನ್ ವೇಗ ಅದ್ಭುತವಾಗಿತ್ತು. ಆದರೆ ಬಳಿಕ ರನ್ ವೇಗಕ್ಕೆ ಕಡಿವಾಣ ಬಿದ್ದಿದ್ದು ತಂಡಕ್ಕೆ ಹಿನ್ನಡೆಯಾಗುವ ಆತಂಕ ಮೂಡಿಸಿತಾದರೂ ಅದಕ್ಕೆ ಬೌಲಿಂಗ್ ವಿಭಾಗ ಅವಕಾಶ ನೀಡಲಿಲ್ಲ.
ಆರ್‌ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ಮತ್ತೊಮ್ಮೆ ಆಸರೆಯಾಗಿದ್ದು ಅಗ್ರ ಕ್ರಮಾಂಕದ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ. ಈ ಪಂದ್ಯದಲ್ಲಿ ಇವರಿಬ್ಬರು 137 ರನ್‌ಗಳ ಬೃಹತ್ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ವಿರಾಟ್ ಕೊಹ್ಲಿ 59 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರೆ ಫಾಫ್ ಡು ಪ್ಲೆಸಿಸ್ 84 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿದರೆ ಉಳಿದ ಆಟಗಾರರಿಂದ ಮತ್ತೊಮ್ಮೆ ನೀರಸ ಪ್ರದರ್ಶನ ವ್ಯಕ್ತವಾಗಿತ್ತು.
ಇನ್ನು ಆರ್‌ಸಿಬಿ ತಂಡದ ಗೆಲುವಿನಲ್ಲಿ ಮತ್ತೊಂದು ದೊಡ್ಡ ಕಾರಣವೆಂದರೆ ವೇಗಿ ಮೊಹಮ್ಮದ್ ಸಿರಾಜ್ ಅವರ ಮಾರಕ ದಾಳಿ. ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನಿಡಿಕೊಂಡು ಬಂದಿರುವ ಸಿರಾಜ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದರು. ಪಂದ್ಯದ ಎರಡನೇ ಎಸೆತದಲ್ಲಿಯೇ ಪಂಜಾಬ್ ಕಿಂಗ್ಸ್ ತಂಡಕ್ಕೆ ವಿಕೆಟ್ ಕಿತ್ತು ಆಘಾತ ನೀಡಿದ್ದರು. ನಂತರವೂ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ವಿಕೆಟ್ ಪಡೆಯುತ್ತಾ ಸಾಗಿದ ಅವರು ಒಂದು ಅದ್ಭುತ ರನೌಟ್‌ಗೂ ಕಾರಣವಾದರು. ಪಂಜಾಬ್ ಕಿಂಗ್ಸ್ ತಂಡದ ಸೋಲಿಗೆ ಸಿರಾಟ್ ಕೊಡುಗೆ ಕೂಡ ಬಹಳ ದೊಡ್ಡದು ಎಂಬುದರಲ್ಲಿ ಅನುಮಾನವಿಲ್ಲ. ಇನ್ನು ಸಿರಾಜ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದುಕೊಂಡ ಬೌಲರ್ ಎನಿಸಿದ್ದು ಪರ್ಪಲ್ ಕ್ಯಾಪ್ ಧರಿಸಿಕೊಂಡಿದ್ದಾರೆ.