ಶನಿವಾರ, ಏಪ್ರಿಲ್ 13ರಂದು ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ರೋಚಕವಾಗಿ ಗೆಲುವು ಸಾಧಿಸಿತು.
ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದು, ಆಡಿದ ಆರು ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು, ಒಂದು ಸೋಲು ಅನುಭವಿಸಿ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡ ಮತ್ತೊಂದು ಹೋರಾಟದ ಹೊರತಾಗಿಯೂ ಕೊನೆಯ ಓವರ್‌ನಲ್ಲಿ ಗೆಲುವಿನಿಂದ ವಂಚಿತವಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಯಾವುದೇ ಅರ್ಧಶತಕವಿಲ್ಲದೇ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್‌ಗಳನ್ನು ಗಳಿಸಿತ್ತು.
148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಶಿಮ್ರಾನ್ ಹೆಟ್ಮೆಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 7 ಕಳೆದುಕೊಂಡು ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು.
ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 10 ರನ್‌ಗಳು ಬೇಕಾಗಿದ್ದಾಗ ಅರ್ಶದೀಪ್ ಸಿಂಗ್ ಬೌಲಿಂಗ್ ಮಾಡಿದರು. ಮೊದಲ ಎರಡು ಬಾಲ್‌ಗಳನ್ನು ಡಾಟ್ ಮಾಡಿದ ನಂತರ, ಮೂರನೇ ಎಸೆತವನ್ನು ಶಿಮ್ರಾನ್ ಹೆಟ್ಮೆಯರ್ ಸಿಕ್ಸರ್‌ಗೆ ಅಟ್ಟಿದರು. ನಾಲ್ಕನೇ ಎಸೆತದಲ್ಲಿ ಎರಡು ರನ್ ಓಡಿದರು. ಉಳಿದ 2 ಎಸೆತಗಳಲ್ಲಿ 2 ರನ್‌ಗಳು ಬೇಕಾಗಿದ್ದಾಗ 5 ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಸಿಕ್ಸರ್ ಬಾರಿಸಿ ತಮ್ಮ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ರಾಜಸ್ಥಾನ್ ರಾಯಲ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ತನುಷ್ ಕೋಟ್ಯಾನ್ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 52 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ವೇಳೆ 31 ಎಸೆತಗಳಲ್ಲಿ 3 ಬೌಂಡರಿ ಸಮೇತ 24 ರನ್ ಗಳಿಸಿದ್ದ ತನುಷ್ ಕೋಟ್ಯಾನ್ ಔಟಾದರು.
ನಂತರ ಯಶಸ್ವಿ ಜೈಸ್ವಾಲ್ 28 ಎಸೆತಗಳಲ್ಲಿ 4 ಬೌಂಡರಿ ಮೂಲಕ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸಂಜು ಸ್ಯಾಮ್ಸನ್ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 18 ರನ್ ಗಳಿಸಿ ಪೆವಿಲಿಯನ್ ಸೇರಿದರು.
ರಿಯಾನ್ ಪರಾಗ್ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರೆ, ಧ್ರುವ್ ಜುರೆಲ್ 6 ರನ್ ಗಳಿಸಿದರು. ಗೆಲುವಿನ ರೂವಾರಿ ಶಿಮ್ರಾನ್ ಹೆಟ್ಮೆಯರ್ ಕೇವಲ 10 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ ಅಜೇಯ 27 ರನ್ ಬಾರಿಸಿದರು. ಉಳಿದಂತೆ ರೋವ್ಮನ್ ಪೊವೆಲ್ 11 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಬೌಲಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಗಿಸೊ ರಬಾಡ ಮತ್ತು ಸ್ಯಾಮ್ ಕರ್ರಾನ್ ತಲಾ ಎರಡು ವಿಕೆಟ್ ಪಡೆದರೆ, ಅರ್ಶ್‌ದೀಪ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಅಥರ್ವ ಟೈಡೆ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿ ಮೊದಲ ವಿಕೆಟ್‌ಗೆ 3.4 ಓವರ್‌ಗಳಲ್ಲಿ 27 ರನ್‌ಗಳ ಜೊತೆಯಾಟ ನೀಡಿದರು. ಅಥರ್ವ ಟೈಡೆ 12 ಎಸೆತಗಳಲ್ಲಿ 2 ಬೌಂಡರಿ ಸಮೇತ 15 ರನ್ ಗಳಿಸಿ ಔಟಾದರು.
ನಂತರ ಬಂದ ಪ್ರಭ್‌ಸಿಮ್ರಾನ್ ಸಿಂಗ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಆರಂಭಿಕ ಜಾನಿ ಬೈರ್‌ಸ್ಟೋವ್ ಕೂಡ 19 ಎಸೆತಗಳಲ್ಲಿ 1 ಬೌಂಡರಿ ಮೂಲಕ 15 ರನ್ ಗಳಿಸಿ ಔಟಾದರು. ಹಂಗಾಮಿ ನಾಯಕ ಸ್ಯಾಮ್ ಕರ್ರಾನ್ ಕೇವಲ 6 ರನ್‌ಗಳಿಗೆ ಆಟ ಮುಗಿಸಿದರು.
ಆ ಬಳಿಕ ಜಿತೇಶ್ ಶರ್ಮಾ 24 ಎಸೆತಗಳಲ್ಲಿ 1 ಬೌಂಡರಿ ಮೂಲಕ 29 ರನ್ ಗಳಿಸಿದರೆ, ಶಶಾಂಕ್ ಸಿಂಗ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 21 ರನ್ ಬಾರಿಸಿದರು. ಅಶುತೋಷ್ ಶರ್ಮಾ 16 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ 31 ರನ್ ಸಿಡಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೇಶವ್ ಮಹಾರಾಜ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರೆ, ಅವೇಶ್ ಖಾನ್ 4 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್ ಮತ್ತು ಯುಜ್ವೇಂದ್ರ ಚಹಾಲ್ ತಲಾ ಒಂದೊಂದು ವಿಕೆಟ್ ಪಡೆದರು.