PBKS vs RR: ಪಂಜಾಬ್ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರಾಯಲ್ಸ್
ನ್ಯೂ ಚಂಡೀಗಢ್: 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಸೋಲು ಕಂಡಿದೆ. ಈ ಲೀಗ್‌ನ 40ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 6 ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಪಂಜಾಬ್ ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ. ಈ ಗೆಲುವಿನ ಮೂಲಕ ರಾಜಸ್ಥಾನ್ ರಾಯಲ್ಸ್ ಸಹ ಅಬ್ಬರಿಸಿದೆ.
ಪಂಜಾಬ್ ಕಿಂಗ್ಸ್ ನೀಡಿದ್ದ 223 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸೊಗಸಾದ ಆರಂಭವನ್ನು ನೀಡಿತು. ವೈಭವ್ ಸೂರ್ಯವಂಶಿ ಅರ್ಷದೀಪ್ ಸಿಂಗ್, ಲಾಕಿ ಫಾರ್ಗ್ಯೂಸನ್ ಅವರನ್ನು ಸಹ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 51 ರನ್ ಸೇರಿಸಿತು. ಈ ವೇಳೆ ವೈಭವ್ ಸೂರ್ಯವಂಶಿ 16 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಅರ್ಷದೀಪ್ ಸಿಂಗ್ ಎಸೆತದಲ್ಲಿ ಶ್ರೇಯಸ್‌ಗೆ ಕ್ಯಾಚ್ ನೀಡಿದರು.

ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೇಲ್ ಜೋಡಿ ಸಹ ಆಕರ್ಷಕ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 38 ಎಸೆತಗಳಲ್ಲಿ 54 ರನ್ ಸೇರಿಸಿತು. ಈ ಹಂತದಲ್ಲಿ ವಿಕೆಟ್ ಕೀಪರ್ ಧ್ರುವ್ ಜುರೇಲ್ 16 ರನ್ ಬಾರಿಸಿ ಔಟ್ ಆದರು.
ಯಶಸ್ವಿ ಅರ್ಧಶತಕ
ರಾಯಲ್ಸ್ ತಂಡದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿ ಅಬ್ಬರಿಸಿದರು. ನಾಯಕ ರಿಯಾನ್ ಪರಾಗ್ 16 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿ ಔಟ್ ಆದರು.
5ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಆರ್‌ಆರ್ ತಂಡದ ಪರ ಐದನೇ ವಿಕೆಟ್‌ಗೆ ಡೊನೊವನ್ ಫೆರೇರಾ ಹಾಗೂ ಶುಭಂ ದುಬೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 151 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಈ ಜೋಡಿ 32 ಎಸೆತಗಳಲ್ಲಿ ಅಜೇಯ 77 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಭರವಸೆಯ ಆಟಗಾರ ಡೊನೊವನ್ ಫೆರೇರಾ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 52 ರನ್ ಬಾರಿಸಿದರು. ಇನ್ನು ಶುಭಂ ದುಬೆ 12 ಎಸೆತಗಳಲ್ಲಿ 31 ರನ್ ಸಿಡಿಸಿದರು.ಅಂತಿಮವಾಗಿ ರಾಯಲ್ಸ್ 19.2 ಓವರ್‌ಗಳಲ್ಲಿ 4 ವಿಕೆಟ್‌ಗೆ 228 ರನ್ ಸೇರಿಸಿ ಜಯ ಸಾಧಿಸಿತು. ಈ ಜಯದ ಮೂಲಕ ರಾಜಸ್ಥಾನ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭ ಸಾಧಾರಣವಾಗಿತ್ತು. ಆರಂಭಿಕ ಪ್ರಿಯಾಂಶ್ ಆರ್ಯ (11 ಎಸೆತ 29 ರನ್) ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಜೋಡಿ ಮೊದಲ ವಿಕೆಟ್‌ಗೆ 2.5 ಓವರ್‌ಗಳಲ್ಲಿ 37 ರನ್ ಸೇರಿಸಿತು. ಎರಡನೇ ವಿಕೆಟ್‌ಗೆ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಕೂಪರ್ ಕಾನೋಲಿ (14 ಎಸೆತ 30 ರನ್) ಜೋಡಿ ಉತ್ತಮ ಜೊತೆಯಾಟವನ್ನು ನೀಡಿತು. ಈ ಜೋಡಿ 33 ಎಸೆತಗಳಲ್ಲಿ 59 ರನ್ ಸೇರಿಸಿತು.
ಆರಂಭಿಕ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ 44 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 59 ರನ್ ಸಿಡಿಸಿ ಔಟ್ ಆದರು. ಶ್ರೇಯಸ್ ಅಯ್ಯರ್ 30 ರನ್ ಬಾರಿಸಿ ಔಟ್ ಆದರು. ಆರನೇ ವಿಕೆಟ್‌ಗೆ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಸೂರ್ಯಾಂಶ್ ಶೆಡ್ಜ್ (ಅಜೇಯ 3 ರನ್) ಜೋಡಿ 12 ಎಸೆತಗಳಲ್ಲಿ ಅಜೇಯ 41 ರನ್ ಸೇರಿಸಿತು. ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ 22 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 62 ರನ್ ಸಿಡಿಸಿತು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 222 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications