2025ರ ಮಹಿಳಾ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದೆ. ಈ ವೇಳೆ ಆಸ್ಟ್ರೇಲಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ಈ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಆಸ್ಟ್ರೇಲಿಯಾ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಭಾರತದ ಸವಾಲನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಶನಿವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಈ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಈ ಪಂದ್ಯದಲ್ಲಿ ಆಸೀಸ್ ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ಎಲ್ಲಿಸ್ ಪೆರ್ರಿ ಭಾರತದ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಪೆರ್ರಿ ಈಗ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 130 ಪಂದ್ಯಗಳನ್ನು ಗೆದ್ದ ತಂಡದ ಸದಸ್ಯರಾಗಿದ್ದಾರೆ. ಈ ಮೊದಲು ಈ ದಾಖಲೆ ಮಿಥಾಲಿ ರಾಜ್ 129 ಪಂದ್ಯ ಗೆದ್ದ ತಂಡದ ಭಾಗವಾಗಿದ್ದರು.

ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್. ಇವರು ಆಸೀಸ್ ಪರ 164 ಪಂದ್ಯಗಳಲ್ಲಿ 4427 ರನ್ ಸಿಡಿಸಿದ್ದಾರೆ. ಅದರಲ್ಲಿ 3 ಶತಕಗಳು ಸೇರಿವೆ. ಇನ್ನು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಪೆರ್ರಿ 168 ಪಂದ್ಯಗಳಲ್ಲಿ 2173 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಸಕ್ತ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 6 ಜಯ, ಒಂದು ಪಂದ್ಯ ರದ್ದಾಗಿದ್ದು 13 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಅಲ್ಲದೆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯವನ್ನು ಸೋತೇ ಇಲ್ಲ.

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಮಾಡಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 24 ಓವರ್‌ಗಳಲ್ಲಿ 97 ರನ್ ಸೇರಿಸಿ ಆಲೌಟ್ ಆಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಲಾರಾ ವೊಲ್ವಾರ್ಡ್ಟ್ 31, ಸಿನಾಲೊ ಜಾಫ್ತಾ 29 ರನ್ ಸಿಡಿಸಿದರು. ಅಸೀಸ್ ಪರ ಅಲಾನಾ ಕಿಂಗ್ 7 ವಿಕೆಟ್ ಪಡೆದರು. ಗುರಿಯನ್ನು ಬೆನ್ನಟ್ಟಿದ ಆಸೀಸ್ ಪರ ಜಾರ್ಜಿಯಾ ವೋಲ್ ಅಜೇಯ 38, ಬೆತ್ ಮೂನಿ 42 ರನ್ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಆಸೀಸ್ 16.5 ಓವರ್‌ಗಳಲ್ಲಿ 3 ವಿಕೆಟ್‌ಗೆ 98 ರನ್ ಸೇರಿಸಿತು.