ಮೇ 9 ಶುಕ್ರವಾರ, ಧರ್ಮಶಾಲಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಎದರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೃಹತ್ ರನ್ ಕಲೆ ಹಾಕಿದೆ.
ಪಂಜಾಬ್ ವಿರುದ್ಧ ಆರ್‌ಸಿಬಿ ಬ್ಯಾಟರ್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್ ಆರ್‌ಸಿಬಿಗೆ ಉತ್ತಮ ರನ್ ಪೇರಿಸಿದರು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 241 ರನ್ ಗಳನ್ನು ಆರ್‌ಸಿಬಿ ಗಳಿಸಿದೆ. ಹೀಗಾಗಿ ಪಂಜಾಬ್ ಗೆಲುವಿಗೆ 242 ರನ್ ಅವಶ್ಯಕತೆ ಇದೆ.

ಪಂಜಾಬ್ ಎದುರು ಟಾಸ್ ಸೋತ ಆರ್‌ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರು. ಕಳೆದ ಪಂದ್ಯದಂತೆ ಈ ಬಾರಿಯೂ ಈ ಜೋಡಿ ಉತ್ತಮ ರನ್ ಗಳಿಸುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ ಅಭಿಮಾನಿಗಳಿಗೆ ಫಾಫ್ ಡು ಪ್ಲೆಸಿಸ್ (9) ವಿಧ್ವತ್ ಕಾವೇರಪ್ಪ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸ್ಪೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ತಮ್ಮ ಹಳೆ ಆಟವನ್ನು ಮುಂದುವರೆಸಿದರು. ಆದರೆ ಮತ್ತೆ ಬೌಲಿಂಗ್ ದಾಳಿಗೆ ಬಂದ ಕನ್ನಡಿಗ ವಿಧ್ವತ್ ಕಾವೇರಪ್ಪ, ವಿಲ್ ಜ್ಯಾಕ್ಸ್ (12) ವಿಕೆಟ್ ಪಡೆದು ಮಿಂಚಿದರು. ನಂತರ ನಾಲ್ಕನೇ ಕ್ರಮಾಂಕ ಆಗಮಿಸಿದ ರಜತ್ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿ ಅಬ್ಬರದ ಜೊತೆಯಾಟವಾಡಿದರು. ಈ ವೇಳೆ ರಜತ್ ಪಾಟಿದಾರ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
ರಜತ್ ಪಾಟಿದಾರ್ ಎದುರಿಸಿದ ಕೇವಲ 26 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗು 3 ಬೌಂಡರಿ ನೆರವಿನಿಂದ 55 ರನ್‌ಗಳಿಸಿ ಸ್ಯಾಮ್ ಕರ್ರನ್ ಬೌಲಿಂಗ್‌ನಲ್ಲಿ ಔಟ್ ಅದರು. ಬಳಿಕ ತನ್ನ ಹೊಡೆಬಡಿ ಆಟ ಮುಂದುವರೆಸಿದ ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಬಾರಿಸಿದರು. ಇನ್ನೊಂದೆಡೆ ಕೊಹ್ಲಿ ಜೊತೆಗೂಡಿದ ಗ್ರೀನ್ ಸಹಾ ಬೊಂಬಾಟ್ ಬ್ಯಾಟಿಂಗ್ ಮಾಡಿದರು.
ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಶತಕ ಹೊಸ್ತಿಯಲ್ಲಿ ಅರ್ಷ್‌ದೀಪ್ ಸಿಂಗ್ ಬೌಲಿಂಗ್ ವಿಕೆಟ್ ಕಳೆದುಕೊಂಡರು. ಕೊಹ್ಲಿ ಎದುರಿಸಿದ 47 ಎಸೆತಗಳಲ್ಲಿ 7 ಬೌಂಡರಿ ಹಾಗು 6 ಸಿಕ್ಸರ್ ಮೂಲಕ 92 ರನ್ ಗಳಿಸಿದರು. ಕೊನೆ ಓವರ್ ಮಾಡಲು ಬಂದ ಹರ್ಷಲ್ ಪಟೇಲ್ ಆರ್‌ಸಿಬಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಒಂದೇ ಓವರ್‌ನಲ್ಲಿ ಕ್ಯಾಮೆರಾನ್ ಗ್ರೀನ್ (46), ದಿನೇಶ್ ಕಾರ್ತಿಕ್ (18) ಮತ್ತು ಮಹಿಪಾಲ್ ಲೊಮ್ರೋರ್ (0) ಅವರನ್ನು ಔಟ್ ಮಾಡುವ ಮೂಲಕ 3 ವಿಕೆಟ್ ಕಬಳಿಸಿದರು. ಸ್ವಪ್ನಿಲ್ ಸಿಂಗ್ ಅಜೇಯ 1 ರನ್ ಗಳಿಸಿದರು.
ಪಂಜಾಬ್ ಪರ ಹರ್ಷಲ್ ಪಟೇಲ್ 3 ವಿಕೆಟ್ ಉರುಳಿಸಿದರೆ, ವಿಧ್ವತ್ ಕಾವೇರಪ್ಪ 2 ವಿಕೆಟ್, ಅರ್ಷ್‌ದೀಪ್ ಸಿಂಗ್ ಮತ್ತು ಸ್ಯಾಮ್ ಕುರಾನ್ 1 ವಿಕೆಟ್ ಪಡೆದುಕೊಂಡರು.