
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ತಂಡ ಎಂದರೆ ಅದು ಮುಂಬೈ ಇಂಡಿಯನ್ಸ್. 5 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಬೇಕು ಎಂಬ ಆಸೆ ಹಲವಾರು ಆಟಗಾರರಲ್ಲಿ ಇರುತ್ತದೆ. ಎಲ್ಲಾ ಆಟಗಾರರಿಗೂ ಸಹ ಮುಂಬೈ ಇಂಡಿಯನ್ಸ್ ಜರ್ಸಿ ತೊಡುವ ಅವಕಾಶ ಸಿಗುವುದಿಲ್ಲ. ಇಂತಹ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶವನ್ನು ಪಡೆದು ಕೇವಲ ಒಂದೇ ಒಂದು ಪಂದ್ಯವನ್ನು ಮಾತ್ರ ಆಡಿದ ಆಟಗಾರರು ಸಹ ಇದ್ದಾರೆ.
ಹೌದು ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದರೂ ಸಹ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಆಡುವ ಅವಕಾಶವನ್ನು ಪಡೆದ 4 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
4. ಅಖಿಲ ಧನಂಜಯ :
ಶ್ರೀಲಂಕಾದ ಸ್ಪಿನ್ ಬೌಲರ್ ಅಖಿಲ ಧನಂಜಯ 2018ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಅವಕಾಶವನ್ನು ಪಡೆದಿದ್ದರು. ಬೆನ್ ಕಟಿಂಗ್ ಬದಲು ಅಖಿಲ ಧನಂಜಯ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಲಾಗಿತ್ತು. ಆ ಪಂದ್ಯದಲ್ಲಿ 4 ಓವರ್‌ಗಳಿಗೆ 47 ರನ್ ನೀಡಿದ ಅಖಿಲ ಧನಂಜಯ ಯಾವುದೇ ವಿಕೆಟ್ ಪಡೆಯದೇ ಕಳಪೆ ಪ್ರದರ್ಶನ ನೀಡಿದರು. ನಂತರದ ಯಾವುದೇ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಅವರು ಪಡೆಯಲಿಲ್ಲ.
3. ನಾಥನ್ ಕೌಲ್ಟರ್ ನೈಲ್ :
2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವ ಅವಕಾಶವನ್ನು ಪಡೆದ ಆಸ್ಟ್ರೇಲಿಯಾದ ಬೌಲರ್ ನಾಥನ್ ಕೌಲ್ಟರ್ ನೈಲ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಆ ಪಂದ್ಯದಲ್ಲಿ 4 ಓವರ್ ಎಸೆದಿದ್ದ ಕೌಲ್ಟರ್ ನೈಲ್ 29 ರನ್ ನೀಡಿ ಒಂದು ವಿಕೆಟ್ ಪಡೆದರು ಸಹ ಮುಂದಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಳ್ಳಲಿಲ್ಲ.
2. ಜೇಕಬ್ ಓರಂ :
ನ್ಯೂಜಿಲೆಂಡ್ ತಂಡದ ಮಾಜಿ ಆಲ್ ರೌಂಡರ್ ಜೇಕಬ್ ಓರಂ ಕೂಡ 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆದಿದ್ದ ಓರಂ 4 ಓವರ್ ಎಸೆದು 22 ರನ್‌ಗಳನ್ನು ನೀಡಿದರು. ಆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯದ ಜೇಕಬ್ ಓರಂ ಮುಂದಿನ ದಿನಗಳಲ್ಲಿ ಯಾವುದೇ ಅವಕಾಶವನ್ನು ಪಡೆಯಲಿಲ್ಲ.
1. ಯುಜುವೇಂದ್ರ ಚಾಹಲ್ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್‌ಗಳಲ್ಲಿ ಒಬ್ಬರಾದ ಯುಜುವೇಂದ್ರ ಚಾಹಲ್ ಅವರು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ ಅನುಭವವನ್ನು ಹೊಂದಿದ್ದಾರೆ. 2013ರಲ್ಲಿ ಮುಂಬೈ ಪರ ಆಡುವ ಅವಕಾಶವನ್ನು ಪಡೆದ ಚಾಹಲ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೇ ನೀರಸ ಪ್ರದರ್ಶನವನ್ನು ತೋರಿದ್ದರು. ನಂತರ 2014ರಲ್ಲಿ ಚಾಹಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು.