ಈ ಸ್ಥಳದಲ್ಲಿ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ; ವೆಚ್ಚ, ಆಸನ ಸಾಮರ್ಥ್ಯಗಳೇನು?
ಭಾರತದಲ್ಲಿ ಸದ್ಯ ಯಾವುದಾದರೂ ಕ್ರೀಡೆಗೆ ಹೆಚ್ಚು ಮಹತ್ವ ಸಿಗುತ್ತಿದೆ ಎಂದರೆ ಅದು ಕ್ರಿಕೆಟ್. ಕ್ರಿಕೆಟ್ ಮತ್ತು ಕ್ರಿಕೆಟಿಗರನ್ನು ಅತಿ ಹೆಚ್ಚು ಪ್ರೀತಿಸುವ ದೊಡ್ಡ ಅಭಿಮಾನಿ ಬಳಗವೇ ಇದೆ. ಭಾರತ ಕ್ರಿಕೆಟ್ ಹುಚ್ಚು ರಾಷ್ಟ್ರವಾಗಿದ್ದು, ದೇಶದ ಮೂಲೆ-ಮೂಲೆಗಳಲ್ಲಿ ಹಲವು ಕ್ರಿಕೆಟ್ ಸ್ಟೇಡಿಯಂಗಳು ನಿರ್ಮಾಣವಾಗಿವೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 23ರಂದು ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಗಂಜಾರಿ ಪ್ರದೇಶದಲ್ಲಿ ಅತ್ಯಾಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಸುದೀರ್ಘ ಪಟ್ಟಿಗೆ ಮತ್ತೊಂದು ಕ್ರೀಡಾಂಗಣವನ್ನು ಸೇರಿಸಲು ದೇಶವು ಸಜ್ಜಾಗಿದೆ.

ಈ ಕ್ರೀಡಾಂಗಣದ ವೆಚ್ಚ ಸುಮಾರು 450 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇದು ಸುಮಾರು 30,000 ಆಸನ ಸಾಮರ್ಥ್ಯದೊಂದಿಗೆ ಆಧುನಿಕ ಸೌಕರ್ಯಗಳಿಂದ ಕೂಡಿರಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಜಂಟಿಯಾಗಿ ಶಂಕುಸ್ಥಾಪನೆ ಸಮಾರಂಭವನ್ನು ಆಯೋಜಿಸಲಿದೆ. ಅಲ್ಲದೆ ಈ ಸಮಾರಂಭದಲ್ಲಿ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
"ಸೆಪ್ಟೆಂಬರ್ 23ರಂದು ಕ್ರಿಕೆಟ್ ಸ್ಟೇಡಿಯಂನ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶಿತ ಭೇಟಿಗಾಗಿ ಗಂಜಾರಿಯಲ್ಲಿ ಸಿದ್ಧತೆಗಳನ್ನು ಪ್ರಾರಂಭಿಸಲಾಗುತ್ತಿದೆ".

"ಬಿಸಿಸಿಐ ಪದಾಧಿಕಾರಿಗಳಲ್ಲದೆ, ಸ್ಟಾರ್ ಕ್ರಿಕೆಟಿಗರು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿರುವುದರಿಂದ, ಇದು ಅದ್ಧೂರಿ ಪ್ರದರ್ಶನವಾಗಲಿದೆ," ಎಂದು ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಕ್ರಿಕೆಟ್ ಕ್ರೀಡಾಂಗಣವನ್ನು ಲಾರ್ಸೆನ್ ಮತ್ತು ಟೂಬ್ರೊ (L&T) ವಿನ್ಯಾಸಗೊಳಿಸಿದೆ ಮತ್ತು ಯೋಜನೆಯ ರೇಖಾಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಮುಂದಿನ ಹಂತಗಳಲ್ಲಿ, ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ(ಯುಪಿಸಿಎ) ಯೋಜನೆಯನ್ನು ಅನುಮೋದಿಸುತ್ತದೆ ಮತ್ತು ಅರಣ್ಯ ಮತ್ತು ಅಂತರ್ಜಲದಂತಹ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಪಡೆಯಲಿದೆ.
ಭೂಸ್ವಾಧೀನಕ್ಕೆ ಸರ್ಕಾರದಿಂದ 120 ಕೋಟಿ ರೂಪಾಯಿ
ಎನ್‌ಒಸಿ ಪಡೆದ ನಂತರ, ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸಮತಟ್ಟುಗೊಳಿಸುವ ಮತ್ತು ಕ್ರೀಡಾಂಗಣದ ಗಡಿ ಗೋಡೆಯ ನಿರ್ಮಾಣದ ಪ್ರಕ್ರಿಯೆಯು ಪ್ರಾರಂಭವಾಗಲಿದೆ.
ರಾಜ್ಯ ಸರ್ಕಾರವು ಭೂಸ್ವಾಧೀನಕ್ಕೆ 120 ಕೋಟಿಯನ್ನು ನಿಗದಿಪಡಿಸಿದೆ, ಉಳಿದ 330 ಕೋಟಿ ರೂಪಾಯಿಯನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸಲಾಗುವುದು.
ಕ್ರೀಡಾಂಗಣ ಪೂರ್ಣಗೊಂಡ ನಂತರ, 30,000 ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸಿದ್ಧವಾಗಲಿದೆ. ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಮತ್ತಿತರ ಸೌಲಭ್ಯಗಳ ಅಭಿವೃದ್ಧಿಗೂ ಶೀಘ್ರದಲ್ಲೇ ಚಾಲನೆ ದೊರೆಯಲಿದೆ.
ಈ ಸ್ಟೇಡಿಯಂ ಉತ್ತರಪ್ರದೇಶದ ಯುವಕರಿಗೆ ಸುರೇಶ್ ರೈನಾ, ಕುಲದೀಪ್ ಯಾದವ್, ಪಿಯೂಷ್ ಚಾವ್ಲಾ, ಮೊಹಮ್ಮದ್ ಕೈಫ್ ಮತ್ತು ಪ್ರವೀಣ್ ಕುಮಾರ್ ಅವರಂತಹ ಭಾರತದ ಕ್ರಿಕೆಟಿಗರ ಸಾಲಿಗೆ ಸೇರಲು ಪ್ರೇರೇಪಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications