
ನವದೆಹಲಿ, ಮಾರ್ಚ್ 17: ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟೀಮ್ ಇಂಡಿಯಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದಿಕೊಂಡಿತ್ತು. ಭಾರತದ ಈ ಸೋಲಿಗೆ ಎಂಎಸ್ ಧೋನಿ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0ಯಿಂದ ಮುಂದಿತ್ತು. ಆದರೆ ಸರಣಿ ಕೊನೆಗೆ ಭಾರತ 2-3ರ ಹಿನ್ನಡೆಯ ಮುಖಭಂಗ ಅನುಭವಿಸಿತ್ತು. 2015ರ ಬಳಿಕ ಭಾರತ ತವರು ನೆಲದಲ್ಲಿ ಏಕದಿನ ಸರಣಿ ಸೋತಿದ್ದು ಅದೇ ಮೊದಲಸಾರಿ. ಸರಣಿ ಗೆಲುವು ನಿರ್ಧರಿಸಲಿದ್ದ ಕೊನೆಯೆರಡು ಪಂದ್ಯಗಳಲ್ಲಿ ಧೋನಿ ಪಾಲ್ಗೊಂಡಿರಲಿಲ್ಲ.
'ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ನಾನು ಯಾವತ್ತಿಗೂ ನಕಾರಾತ್ಮಕವಾಗಿ ಮಾತನಾಡಲಾರೆ. ಕಳೆದ ಕೆಲವು ವರ್ಷಗಳಿಂದ ಟೆಸ್ಟ್ ತಂಡದೊಂದಿಗೆ ಅವರೇನು ಸಾಧನೆ ತೋರಿದ್ದಾರೆ ಎಂಬುದನ್ನು ನೋಡಿದ್ದೇನೆ. ಆ ಸಂದರ್ಭಗಳಲ್ಲಿ ತಂಡದಲ್ಲಿ ಧೋನಿ ಇರಲಿಲ್ಲ. ಆದರೆ ಧೋನಿ ಉಪಸ್ಥಿತಿ ತಂಡಕ್ಕೆ ಪ್ರಶಾಂತತೆ ತರುವುದನ್ನು ನಾನು ನೋಡಿದ್ದೇನೆ' ಎಂದು ಪಾಂಟಿಂಗ್ ಅಭಿಪ್ರಾಯಿಸಿದರು.
'ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕಡೆಯೆರಡು ಪಂದ್ಯಗಳಲ್ಲಿ ಧೋನಿ ಬ್ಯಾಟಿಂಗ್ ನೋಡುವ ಅವಕಾಶವನ್ನು ನಾವು ಕಳೆದುಕೊಂಡೆವು. ಭಾರತ ಸರಣಿ ಸೋತಿದ್ದಕ್ಕೆ ಇದೂ ಕಾರಣವಾಗಿರಬಹುದು' ಎಂದು ಎನ್‌ಡಿಟಿವಿ ಜೊತೆ ಮಾತನಾಡುತ್ತ ರಿಕಿ ಭಾನುವಾರ (ಮಾರ್ಚ್ 17) ಹೇಳಿಕೊಂಡಿದ್ದಾರೆ.