ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೂ ಮುನ್ನ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿ. ಇಂಗ್ಲೆಂಡ್ ತಂಡ ಜನವರಿ 22 ರಿಂದ ಭಾರತ ಪ್ರವಾಸದಲ್ಲಿದ್ದು, 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ನಂತರ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕಾಗಿ ಟೀಮ್ ಇಂಡಿಯಾವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಪ್ರಕಟಿಸಿಲ್ಲ. ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆಯ್ಕೆ ಸಮಿತಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಲಿದೆ.
ಇಂಗ್ಲೆಂಡ್ ವಿರುದ್ಧ ಆಡುವ ಭಾರತ ತಂಡವು ಬಹುಶಃ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಅದೇ ಆಗಿರುತ್ತದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಭಾರತ ಏಕದಿನ ಸರಣಿಯನ್ನು ಆಡಲಿದೆ.

ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳು ನಾಗ್ಪುರ (6 ಫೆಬ್ರವರಿ), ಕಟಕ್ (9 ಫೆಬ್ರವರಿ) ಮತ್ತು ಅಹಮದಾಬಾದ್ (12 ಫೆಬ್ರವರಿ) ನಲ್ಲಿ ನಡೆಯಲಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಸರಣಿ ಸೋಲಿನ ನಂತರ ಏಕದಿನ ಮಾದರಿಯಲ್ಲಿ ಭಾರತ ತಂಡದ ಮೊದಲ ಪಂದ್ಯ ಇದಾಗಿದೆ.
ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿರುವ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಚಾಂಪಿಯನ್ಸ್ ಟ್ರೋಫಿಗೂ ಮೊದಲು ವಿಶ್ರಾಂತಿ ಪಡೆಯಬಹುದು. ಅವರ ಗಾಯ ಮತ್ತು ಕೆಲಸದ ಹೊರೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದಲೂ ಹೊರಗುಳಿಯಬಹುದು. ಸಿರಾಜ್ ಆಸ್ಟ್ರೇಲಿಯಾದಲ್ಲಿ ಎಲ್ಲಾ 5 ಟೆಸ್ಟ್‌ಗಳನ್ನು ಆಡಿದ್ದಾರೆ. ಬುಮ್ರಾ ಬದಲಿಗೆ 2023ರ ವಿಶ್ವಕಪ್ ಭಾರತ ತಂಡದ ಭಾಗವಾಗಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗು ಮೊಹಮ್ಮದ್ ಸಿರಾಜ್ ಬದಲಿಗೆ ಹರ್ಷಿತ್ ರಾಣಾ ಅವರನ್ನು ಸೇರಿಸಿಕೊಳ್ಳಬಹುದು. ಆದರೆ, ಹರ್ಷಿತ್ ರಾಣಾಗೆ ಇನ್ನೂ ಏಕದಿನ ಮಾದರಿಯಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ.
ಏಕದಿನ ವಿಶ್ವಕಪ್ 2023ರಲ್ಲಿ ಆಡಿದ ಹೆಚ್ಚಿನ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಬಹುದು. ಇವರಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗುತ್ತದೆಯೋ? ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಕೆಎಲ್ ರಾಹುಲ್ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಿಷಬ್ ಪಂತ್ ನಂತರ, ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟರ್‌ಗೆ ಆಯ್ಕೆಯಾಗಬಹುದು. ಡಿಸೆಂಬರ್ 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಕೊನೆಯ ಏಕದಿನ ಪಂದ್ಯ ಆಡಿದ ಸ್ಯಾಮ್ಸನ್ ಶತಕವನ್ನು ಗಳಿಸಿದ್ದರು. ಆದರೆ, ಶ್ರೀಲಂಕಾ ಪ್ರವಾಸ ಭಾರತ ತಂಡದಲ್ಲಿ ಅವರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.
ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತ ತಂಡ ಪ್ರಮುಖ ಆಟಗಾರ. 2023 ರ ವಿಶ್ವಕಪ್‌ನಲ್ಲಿ ಪಾಂಡ್ಯ ಗಾಯಗೊಂಡ ನಂತರ ಭಾರತವು ಸಮತೋಲನವನ್ನು ಕಳೆದುಕೊಂಡಿತ್ತು. ಇದೀಗ ಟೀಮ್ ಇಂಡಿಯಾ ಬ್ಯಾಕ್-ಅಪ್ ಬ್ಯಾಟಿಂಗ್ ಆಲ್‌ರೌಂಡರ್ ಅನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ಜಾಗಕ್ಕೆ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ರೇಸ್‌ನಲ್ಲಿದ್ದಾರೆ.
ಇಬ್ಬರು ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳು ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಿದೆ. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಪೈಕಿ ಯಾರಿಗಾದರೂ ಅವಕಾಶ ಸಿಗುವುದು ಖಚಿತ. ಕುಲದೀಪ್ ಯಾದವ್ ಅವರನ್ನು ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿ ಕಾಣಬಹುದು. ಕುಲದೀಪ್ ತಂಡದಲ್ಲಿ ಇಲ್ಲದಿದ್ದರೆ ರವಿ ಬಿಷ್ಣೋಯ್ ಅಥವಾ ವರುಣ್ ಚಕ್ರವರ್ತಿ ಅವರನ್ನು ಬ್ಯಾಕ್ ಅಪ್ ಆಗಿ ಆಯ್ಕೆ ಮಾಡಬಹುದು.
ಮೊಹಮ್ಮದ್ ಶಮಿ ದೇಶೀಯ ಕ್ರಿಕೆಟ್‌ನಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಿದ್ದಾರೆ. ಸುಮಾರು 15 ತಿಂಗಳ ನಂತರ ಟೀಮ್ ಇಂಡಿಯಾಗೆ ಮರಳುವ ಸಾಧ್ಯತೆಯಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಮಿಂಚಿದ ಅರ್ಷದೀಪ್ ಸಿಂಗ್ ಅವರ ಸ್ಥಾನವನ್ನು ಭದ್ರವಾಗಿದೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ ಪ್ರಸಿದ್ಧ್ ಕೃಷ್ಣ.