ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದೆ.
ಅಕ್ಟೋಬರ್ 9 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ವೇಗದ ಬೌಲರ್ ಮಯಾಂಕ್ ಯಾದವ್ ಮತ್ತು ಸ್ಟಾರ್ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದರು. ಇದೀಗ ಎರಡನೇ ಟಿ20 ಪಂದ್ಯದಲ್ಲಿಯೂ ಮತ್ತೋರ್ವ ವೇಗದ ಬೌಲರ್ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡನೇ ಟಿ20 ಪಂದ್ಯ ನಡೆಯುತ್ತಿರುವುದರಿಂದ ಹರ್ಷಿತ್ ರಾಣಾ ಅವರು ಟೀಮ್ ಇಂಡಿಯಾಕ್ಕೆ ಪಾದರ್ಪಾಣೆ ಮಾಡುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಕೂಡ ತವರಿನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಒಂದು ವೇಳೆ ಅವರಿಗೆ ಬಾಂಗ್ಲಾದೇಶ ವಿರುದ್ದ ಎರಡನೇ ಟಿ20 ಆಡುವ ಅವಕಾಶ ಸಿಕ್ಕರೆ, ತಮ್ಮ ತವರು ನೆಲದಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.
ಹರ್ಷಿತ್ ರಾಣಾ ತಂಡದಲ್ಲಿ ಆಡಲು ಅವಕಾಶ ಕೊಟ್ಟರೆ, ಯಾವ ಆಟಗಾರನನ್ನು ಕೈಬಿಡಬೇಕು ಎಂಬ ಪ್ರಶ್ನೆ ಎದ್ದಿದೆ. ಇದರಲ್ಲಿ ಮೊದಲು ಬರುತ್ತಿರುವ ಹೆಸರು ನಿತೀಶ್ ಕುಮಾರ್ ರೆಡ್ಡಿ. ಅವರು ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ. ಆದರೆ ಟೀಮ್ ಮ್ಯಾನೇಜ್ಮೆಂಟ್ ಹರ್ಷಿತ್ ಅವರಿಗೆ ಅವಕಾಶ ನೀಡದರೆ, ರಿಯಾನ್ ಪರಾಗ್ ಅವರ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಮೊದಲ ಪಂದ್ಯದಲ್ಲಿ ಅವರಿಗೆ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ.
ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್ ಮುನ್ನಡೆಸುತ್ತಿದ್ದಾರೆ. ಎಡಗೈ ವೇಗಿ ಕಳೆದ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು. ಜೊತೆಗೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಮಯಾಂಕ್ ಯಾದವ್ ಅವರಿಗೆ ಬೆಂಬಲ ನೀಡಿದ್ದರು. ಇದೀಗ ಹರ್ಷಿತ್ ರಾಣಾ ಅವರು ಪಾದರ್ಪಾಣೆ ಮಾಡುವ ಸಾಧ್ಯತೆಯಿದ್ದು, ಅರ್ಷದೀಪ್-ಮಯಾಂಕ್ ಅವರೊಂದಿಗೆ ತ್ರಿಕೋನ ವೇಗದ ಬೌಲಿಂಗ್‌ವ್ಯೂಹವನ್ನು ರಚಿಸಬಹುದು. ಹಾರ್ದಿಕ್ ತಂಡದಲ್ಲಿ ನಾಲ್ಕನೇ ವೇಗದ ಬೌಲರ್ ಪಾತ್ರವನ್ನು ನಿರ್ವಹಿಸಬಹುದು. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಸುಂದರ್ ತಮ್ಮ ಕೆಲಸ ಮಾಡಬಹುದು.
ಮೊದಲ ಟಿ20 ಪಂದ್ಯಕ್ಕೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ಭಾರತಕ್ಕೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಅದರಂತೆ ಸಂಜು ಮತ್ತ ಅಭಿಷೇಕ್ ಜೋಡಿ ಭಾರತಕ್ಕೆ ಬಿರುಸಿನ ಆರಂಭವನ್ನು ನೀಡಿದ್ದರು. ಎರಡನೇ ಪಂದ್ಯದಲ್ಲೂ ಈ ಆರಂಭಿಕ ಜೋಡಿ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಇಳಿಯಲಿದ್ದಾರೆ. ಒಂದು ವೇಳೆ ನಿತೀಶ್ ರೆಡ್ಡಿ ಔಟಾದರೆ ರಿಯಾನ್ ಪರಾಗ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಫಿನಿಶರ್ ಪಾತ್ರ ನಿರ್ವಹಿಸಲಿದ್ದಾರೆ.
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ/ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.