ಪ್ರಭಸಿಮ್ರನ್ ಸಿಂಗ್ ಭರ್ಜರಿ ಬ್ಯಾಟಿಂಗ್ ಪಂಜಾಬ್‌ಗೆ ಜಯ: ಕ್ವಿಂಟನ್ ಡಿಕಾಕ್ ಶತಕ ವ್ಯರ್ಥ
ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್ (ಅಜೇಯ 80 ರನ್) ಹಾಗೂ ವೇಗಿ ಅರ್ಷದೀಪ್ ಸಿಂಗ್ (22ಕ್ಕೆ 3) ಇವರುಗಳ ಭರ್ಜರಿ ಪ್ರದರ್ಶನದ ಫಲವಾಗಿ ಪಂಜಾಬ್ ಕಿಂಗ್ಸ್ 19ನೇ ಆವೃತ್ತಿ ಐಪಿಎಲ್‌ನ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಪಂಜಾಬ್ ಈ ಆವೃತ್ತಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದು, 9 ಅಂಕಗಳೊಂದಿಗೆ ಅಗ್ರ ಸ್ಥಾನ ಭದ್ರ ಪಡಿಸಿಕೊಂಡಿದೆ. ಅಲ್ಲದೆ ಈ ಲೀಗ್‌ನಲ್ಲಿ ಒಂದೇ ಒಂದು ಸೋಲನ್ನು ಕಾಣದ ತಂಡ ಎಂಬ ಹೆಗ್ಗಳಿಕೆಯನ್ನು ಸಹ ತನ್ನದಾಗಿಸಿಕೊಂಡಿದೆ.
196 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ತಂಡದ ಆರಂಭ ಸಾಧಾರಣವಾಗಿತ್ತು. ಪ್ರಭಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಜೋಡಿ ಮೊದಲ ವಿಕೆಟ್‌ಗೆ 27 ರನ್ ಸೇರಿಸಿತು. ಈ ಹಂತದಲ್ಲಿ ಪ್ರಿಯಾಂಶ್ ಆರ್ಯ್ 15 ರನ್ ಬಾರಿಸಿ ಔಟ್ ಆದರು. ಭರವಸೆಯ ಆಟಗಾರ ಕೂಪರ್ ಕಾನೋಲಿ ಜವಾಬ್ದಾರಿ ಮರೆತರು. ಪರಿಣಾಮ ಪಂಜಾಬ್ 45 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಈ ಹಂತದಲ್ಲಿ ಮೂರನೇ ವಿಕೆಟ್‌ಗೆ ಜೊತೆಯಾದ ಪ್ರಭಸಿಮ್ರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಆಟಕ್ಕೆ ಬ್ರೇಕ್ ಹಾಕುವಲ್ಲಿ ಮುಂಬೈ ಬೌಲರ್‌ಗಳು ವಿಫಲರಾದರು. ಈ ಜೋಡಿ 67 ಎಸೆತಗಳಲ್ಲಿ 139 ರನ್ ಸೇರಿಸಿತು. ಈ ಹಂತದಲ್ಲಿ 66 ರನ್ ಬಾರಿಸಿದ್ದ ಶ್ರೇಯಸ್ ಅಯ್ಯರ್ ಶಾರ್ದೂಲ್ ಠಾಕೂರ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು. ಇವರು ಔಟ್ ಆದಾಗ ತಂಡದ ಮೊತ್ತ 184 ರನ್ ಆಗಿತ್ತು. ಪ್ರಭಸಿಮ್ರನ್ ಸಿಂಗ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಜೋಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿತು.
ಪ್ರಭಸಿಮ್ರನ್ ಸಿಂಗ್ ಅಬ್ಬರ
ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್ 39 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 80 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಪಂಜಾಬ್ 16.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭ ಕಳಪೆಯಾಗಿತ್ತು. ರೋಹಿತ್ ಶರ್ಮಾ ಅವರ ಬದಲಿಗೆ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಕ್ವಿಂಟನ್ ಡಿಕಾಕ್ ಪಡೆದರು. ಆದರೆ ಇವರಿಗೆ ರಯಾನ್ ರಿಕಲ್ಟನ್ (2) ಉತ್ತಮ ಜೊತೆಯಾಟದ ಕಾಣಿಕೆ ನೀಡಲಿಲ್ಲ. ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್ (0) ನಿರಾಸೆ ಅನುಭವಿಸಿದರು.
ಡಿಕಾಕ್ ಶತಕದ ಅಬ್ಬರ
3ನೇ ವಿಕೆಟ್‌ಗೆ ನಮನ್ ಧೀರ್ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮಿಡ್ಲ್ ಆರ್ಡರ್‌ನಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಿ ಅಬ್ಬರಿಸಿತು. ಈ ಅವಧಿಯಲ್ಲಿ ನಮನ್ ಧೀರ್ 50 ರನ್ ಬಾರಿಸಿ ಔಟ್ ಆದರು. ಹಾರ್ದಿಕ್ ಪಾಂಡ್ಯ 14 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 60 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 112 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಡಿಕಾಕ್ ಈ ಆವೃತ್ತಿಯಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 195 ರನ್ ಸೇರಿಸಿತು. ವೇಗದ ಬೌಲರ್ ಅರ್ಷದೀಪ್ ಸಿಂಗ್ 22 ರನ್ ನೀಡಿ 3 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications