ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪರದಾಡುವ ಸ್ಟಾರ್ ಪ್ಲೇಯರ್‌ಗಳ ಪಟ್ಟಿಯಲ್ಲಿ ಭರವಸೆಯ ಪೃಥ್ವಿ ಶಾ ಸಹ ಒಬ್ಬರು. ಇವರು ಸದ್ಯ ದೇಶದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಪೃಥ್ವಿ ಆಯ್ಕೆದಾರರ ಗಮನ ಸೆಳೆಯುವ ಕಸರತ್ತು ನಡೆಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದ್ದ ಪೃಥ್ವಿ ಎರಡನೇ ಇನಿಂಗ್ಸ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.
ಚಂಡೀಗಢ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಪೃಥ್ವಿ ಶಾ ಕೇವಲ 8 ರನ್ ಕಲೆ ಹಾಕುವಲ್ಲಿ ಸಫಲರಾಗಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ನೈಜ್ಯ ಆಟವನ್ನು ಆಡಿದ ಪೃಥ್ವಿ ತಮ್ಮನ್ನು ಸಹ ಆಯ್ಕೆಗೆ ಪರಿಗಣಿಸುವಂತೆ ಬ್ಯಾಟಿಂಗ್ ಮಾಡಿದರು. ಇವರು 156 ಎಸೆತಗಳಲ್ಲಿ 29 ಬೌಂಡರಿ, 5 ಸಿಕ್ಸರ್ ಸಹಾಯದಿಂದ 222 ರನ್ ಬಾರಿಸಿ ಅಬ್ಬರಿಸಿದರು. ಇವರ ಈ ಅಮೋಘ ಆಟದ ನೆರವಿನಿಂದ ಮಹಾರಾಷ್ಟ್ರ 2ನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 359 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿದೆ.

ಭಾರತದ ಪರ ಈಗಾಗಲೇ 5 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ, ಆರಂಭಿಕರಾಗಿ ಗಮನ ಸೆಳೆದಿದ್ದರು. ಆದರೆ ಇವರ ಆಟ ಸ್ಥಿರತೆ ಕಳೆದುಕೊಳ್ಳುತ್ತಿದ್ದಂತೆ ಇವರನ್ನು ತಂಡದಿಂದ ಕೈ ಬಿಡಲಾಯಿತು. ಬಳಿಕ ಇವರನ್ನು ಬಿಸಿಸಿಐ ಆಯ್ಕೆ ಸಮಿತಿ ಸಹ ಕಡೆಗಣಿಸಿತು. ಇವರು ಭಾರತದ ಪರ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 339 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 2 ಅರ್ಧಶತಕಗಳು ಸಹ ಸೇರಿವೆ. ಅಲ್ಲದೆ ಇವರು 6 ಏಕದಿನ ಪಂದ್ಯಗಳನ್ನು ಸಹ ಆಡಿದ ಅನುಭವ ಹೊಂದಿದ್ದಾರೆ.
ಪೃಥ್ವಿ ಶಾ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ಭಾರತದ ಪರ 2020ರಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದ್ದ ಭಾರತ ತಂಡದ ಸದಸ್ಯರೂ ಆಗಿದ್ದರು. ಇದೇ ಪ್ರವಾಸ ಇವರಿಗೆ ಕೊನೆಯದ್ದಾಗಿತ್ತು. ಇಲ್ಲಿಂದ ಪೃಥ್ವಿ ಶಾ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವುದು ಕಷ್ಟವಾಯಿತು.
ಗುರಿಯನ್ನು ಬೆನ್ನಟ್ಟಿದ ಚಂಡೀಗಢ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕಳಪೆ ಆರಂಭ ಕಂಡಿತು. ಆರಂಭಿಕ ಶಿವಂ (3) ರನ್ ಕಲೆ ಹಾಕುವಲ್ಲಿ ವಿಫಲರಾದರು. 464 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚಂಡೀಗಢ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತುವ ಕಾರ್ಯವನ್ನು ಅರ್ಜುನ್ ಆಜಾದ್ ಅಜೇಯ 63 ಹಾಗೂ ಮನನ್ ವೋಹ್ರಾ ಅಜೇಯ 53 ರನ್ ಬಾರಿಸಿದ್ದರೆ. ಚಂಡೀಗಣ ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 129 ರನ್ ಸೇರಿಸಿದೆ. ಪಂದ್ಯದಲ್ಲಿ ಗೆಲುವು ದಾಖಲಿಸಲು ಚಂಡೀಗಢ ತಂಡಕ್ಕೆ ಇನ್ನು 335 ರನ್ ಅವಶ್ಯಕತೆ ಇದೆ.