IPL 2025 Auction: 'ಜೂನಿಯರ್ ಸೆಹ್ವಾಗ್' ಬಿರುದು ಪಡೆದ ಆಟಗಾರನ ಕೈ ಹಿಡಿಯದ ಅದೃಷ್ಟ!
ಕ್ರಿಕೆಟ್ ಆಟದಲ್ಲಿ ಆಟಗಾರರಿಗೆ ಅದೃಷ್ಟ ಎಂಬುದು ಬಹಳ ಮೌಲ್ಯಯುತವಾಗಿದೆ. ಕೆಲವು ಆಟಗಾರರು ರಾತ್ರೋರಾತ್ರಿ ಹೀರೋಗಳಾದರೆ ಇನ್ನು ಕೆಲವರು 'ಹೀರೋನಿಂದ ಶೂನ್ಯಕ್ಕೆ' ಹೋಗಲು ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಇಂತಹ ಪರಿಸ್ಥಿತಿಯನ್ನು ಟೀಮ್ ಇಂಡಿಯಾದ ಯುವ ಸ್ಟಾರ್ ಬ್ಯಾಟರ್ ಪೃಥ್ವಿ ಶಾ ಎದುರಿಸುತ್ತಿದ್ದಾರೆ.
ಪೃಥ್ವಿ ಶಾ ಟೀಮ್ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಾಗಲೇ ಗಾಯ ಹಾಗೂ ಫಾರ್ಮ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಪರಿಣಾಮ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಕನಸಿ ಮಾತಾಯಿತು. ಟೀಮ್ ಇಂಡಿಯಾ ಮಾಜಿ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಂತೆ ಇನಿಂಗ್ಸ್‌ನ ಮೊದಲ ಎಸೆತದಿಂದ ಪೃಥ್ವಿ ಶಾ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿದ್ದರು. ಹೀಗಾಗಿ ಅವರನ್ನು ಸೆಹ್ವಾಗ್ ಅವರೊಂದಿಗೆ ಹೋಲಿಕೆ ಮಾಡಲಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಪೃಥ್ವಿ ವೃತ್ತಿಜೀವನದಲ್ಲಿ ಹಿನ್ನಡೆ ಕಾಣುತ್ತಿದ್ದಾರೆ.

ಪೃಥ್ವಿ ಶಾ ಮೊದಲು ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡರು. ನಂತರ ರಣಜಿ ಟ್ರೋಫಿ, ಈಗ ಐಪಿಎಲ್ ತಂಡಗಳು ಕೂಡ ಪೃಥ್ವಿಗೆ ಪ್ರಾಮುಖ್ಯತೆ ನೀಡಿಲ್ಲ. ಹೀಗಾಗಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪೃಥ್ವಿ ಶಾ ಆನ್‌ಸೋಲ್ಡ್ ಆಟಗಾರ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ.
ಮಣೆ ಹಾಕದ ಡೆಲ್ಲಿ
ಪೃಥ್ವಿ ಶಾ ದೀರ್ಘ ಕಾಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಅವರು 2018 ರಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಐಪಿಎಲ್ 2024ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ಯಾವುದಾದರೊಂದು ತಂಡ ಅವರನ್ನು ಖರೀದಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಯಾವ ತಂಡವೂ ಅವರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಇದು ಅವರ ವೃತ್ತಿಜೀವನದ ಮತ್ತೊಂದು ಹಿನ್ನಡೆಯಾಗಿದೆ.
ರಣಜಿ ತಂಡದಿಂದ ಹೊರಗೆ
ಪೃಥ್ವಿ ಶಾ ಕೊನೆಯದಾಗಿ 2021ರಲ್ಲಿ ಟೀಮ್ ಇಂಡಿಯಾ ಪರ ಆಡಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭಾರತ ಪರ ಶತಕ ಸಿಡಿಸಿದ ಪೃಥ್ವಿ ಶಾ ಮಿಂಚಿದ್ದಾರೆ. ಅಲ್ಲದೆ, ದೇಶೀಯ ಟೂರ್ನಿಗಳಲ್ಲಿಯೂ ಶಾ ಅವರ ಉತ್ತಮ ಪ್ರದರ್ಶನ ಮುಂದುವರಿದಿದೆ. ಆದರೆ, ಅವರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ನತ್ತ ಮುಖ ಮಾಡಿದರೂ ವಿಶೇಷ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಇತ್ತೀಚೆಗೆ ಅವರನ್ನು ಫಿಟ್ನೆಸ್ ಕಾರಣದಿಂದ ಮಂಬೈ ಕ್ರಿಕೆಟ್ ಬೋರ್ಡ್ ರಣಜಿ ತಂಡದಿಂದ ಕೈಬಿಟ್ಟಿತ್ತು. ಇದೀಗ ಐಪಿಎಲ್ ಹರಾಜಿನಲ್ಲಿ ಪೃಥ್ವಿ ಬಿಡ್ ಆಗದಿರುವುದು ಬೇಸರದ ಸಂಗತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications