ಕ್ರಿಕೆಟ್ ಅಂಗಳದಲ್ಲಿ ಅದೆಷ್ಟೋ ದಾಖಲೆಗಳನ್ನು ಯುವ ಆಟಗಾರರು ಅಳಿಸಿ ಹಾಕುತ್ತಾರೆ. ಇನ್ನು ಹಲವು ದಾಖಲೆಗಳನ್ನು ಅಳಿಸಲು ಆಗದು. ಇನ್ನು ಹಲವು ದಾಖಲೆಗಳನ್ನು ಅಳಿಸಲು ಸಾಧ್ಯವಿಲ್ಲ, ಅವುಗಳನ್ನು ಸಮನಾಗಿಸಬಹುದು. ಇಂತಹದ್ದೇ ಒಂದು ಅಪರೂಪದ ದಾಖಲೆಯನ್ನು ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾಂಶ್ ಆರ್ಯ ಮಾಡಿದ್ದಾರೆ. ಇವರು ಈ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ್ದಾರೆ.
2007 ಟಿ20 ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಈ ದಾಖಲೆಯನ್ನು ಹಲವು ಬಾರಿ ಸಮಗಟ್ಟಲಾಗಿದೆ. ಈ ದಾಖಲೆಯನ್ನು ನೆನಪಿಸುವಂತಹ ಬ್ಯಾಟಿಂಗ್‌ನ್ನು ಪ್ರಿಯಾಂಶ್ ಆರ್ಯ ಮಾಡಿದ್ದಾರೆ. ತಮ್ಮ ಅಮೋಘ ಬ್ಯಾಟಿಂಗ್ ಕಲೆಯಿಂದ ಆರ್ಯ ಎಲ್ಲರ ಚಿತ್ತ ಕದ್ದಿದ್ದಾರೆ.

ಶನಿವಾರ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ಮತ್ತು ಉತ್ತರ ದೆಹಲಿ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ದಕ್ಷಿಣ ದೆಹಲಿ ಪರ ಬ್ಯಾಟ್ ಮಾಡಿದ ಪ್ರಿಯಾಂಶ್ ಆರ್ಯ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್‌ಗಳನ್ನು ಬಾರಿಸುವ ಐತಿಹಾಸಿಕ ಸಾಧನೆಯನ್ನು ಸಾಧಿಸಿದರು. ಉತ್ತರ ದೆಹಲಿ ಸ್ಪಿನ್ ಬೌಲರ್ ಮನನ್ ಭರದ್ವಾಜ್ ವಿರುದ್ಧ ಪ್ರಿಯಾಂಶ್ ಆರು ಸಿಕ್ಸರ್ ಸಾಧನೆ ಮಾಡಿದ್ದಾರೆ. ಈ ಮೂಲಕ ಇವರು ರವಿಶಾಸ್ತ್ರಿ ಮತ್ತು ಯುವರಾಜ್ ಸಿಂಗ್ ನಂತರ ಒಂದು ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಮೂರನೇ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಒಂದು ಹಂತದಲ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿದ್ದ ಪ್ರಿಯಾಂಶ್ 12ನೇ ಓವರ್‌ನಲ್ಲಿ ಗೇರ್ ಶಿಫ್ಟ್ ಮಾಡಿದರು. ಇವರು ಮನನ್ ಅವರ ಒಂದು ಓವರ್ ನಲ್ಲಿ 6 ಸಿಕ್ಸರ್ ಬಾರಿಸಿ ಸಂಚಲನ ಮೂಡಿಸಿದರು. ಈ ಓವರ್‌ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪಂದ್ಯ ಮತ್ತೊಂದು ಕಾರಣಕ್ಕೂ ಇತಿಹಾಸದ ಪುಟ ಸೇರಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ತಂಡ ಒಂದು 300ಕ್ಕೂ ಹೆಚ್ಚು ರನ್ ದಾಖಲಿಸಿದ ಹಿರಿಮೆ ಮೆರೆದಿದೆ. ದಕ್ಷಿಣ ದೆಹಲಿ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 308 ರನ್ ಸೇರಿಸಿ ಇತಿಹಾಸ ನಿರ್ಮಿಸಿದೆ.ಈ ಪಂದ್ಯದಲ್ಲಿ ಒಟ್ಟು 31 ಸಿಕ್ಸರ್, 19 ಬೌಂಡರಿ ಹರಿದು ಬಂದವು. ಈ ಮೂಲಕ ಒಂದೇ ಇನ್ನಿಂಗ್ಸ್‌ನಲ್ಲಿ 50 ಬೌಂಡರಿಗಳು ದಾಖಲಾಗಿದ್ದು ಇತಿಹಾಸವಾಗಿದೆ.
ಪುರುಷರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನೇಪಾಳ, ಮಂಗೋಲಿಯಾ ವಿರುದ್ಧ 314 ರನ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದೆ. ಈಗ ದಕ್ಷಿಣ ದೆಹಲಿ ತಂಡ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಐಪಿಎಲ್ ಮೆಗಾ ಹರಾಜು ಈ ಬಾರಿ ನಡೆಯಲಿದ್ದು, ಮಾಲೀಕರು ಯುವ ಆಟಗಾರರಿಗೆ ಮಣೆ ಹಾಕಲಿದ್ದಾರೆ. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ದಕ್ಷಿಣ ದೆಹಲಿ ತಂಡದ ಪರ ಅಮೋಘ ಬ್ಯಾಟಿಂಗ್ ನಡೆಸಿದ ಪ್ರಿಯಾಂಶ್ ಆರ್ಯ ಮೇಲೆ ಮಾಲೀಕರ ಚಿತ್ತ ನೆಟ್ಟಿದೆ. ಇವರನ್ನು ತಂಡಕ್ಕೆ ಖರೀದಿಸಲು ಮಾಲೀಕರು ಪ್ಲ್ಯಾನ್ ನಡೆಸಿದ್ದಾರೆ.