
ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಲೀಗ್ ಟೂರ್ನಮೆಂಟ್‌ಗಳು ಸಾಕಷ್ಟು ಪ್ರಸಿದ್ಧವಾಗಿದೆ. ಐಪಿಎಲ್‌ನಿಂದ ಆರಂಭವಾಗಿ ಈಗ ವಿಶ್ವದ ಬಹುತೇಕ ಎಲ್ಲಾ ಕ್ರಿಕೆಟ್ ಆಡುವ ರಾಷ್ಟ್ರಗಳು ಕೂಡ ಕ್ರಿಕೆಟ್ ಲೀಗ್‌ಅನ್ನು ಆಯೋಜಿಸುತ್ತಿವೆ. ಆಸ್ಟ್ರೇಲಿಯಾದ ಬಿಗ್‌ಬ್ಯಾಶ್, ವೆಸ್ಟ್ ಇಂಡೀಸ್‌ನ ಕೆರೀಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನದ ಪಾಕಿಸ್ತಾನ ಸೂಪರ್ ಲೀಗ್, ಶ್ರೀಲಂಕಾದ ಲಂಕಾ ಸೂಪರ್ ಲೀಗ್, ಇಂಗ್ಲೆಂಡ್‌ನ ದಿ ಹಂಡ್ರೆಡ್ ಮುಂತಾದ ಲೀಗ್‌ಗಳು ಈಗ ಸಾಕಷ್ಟು ಪ್ರಸಿದ್ಧವಾಗಿದೆ.
ಸದ್ಯ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದ್ದು ವಿಶ್ವ ಕ್ರಿಕೆಟ್‌ನ ಪ್ರಮುಖ ಆಟಗಾರರು ಈ ಲೀಗ್‌ನ ಕುರಿತಾಗಿ ಮಾತನಾಡುತ್ತಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ನೀಡಿದ ಹೇಲಿಕೆಯೊಂದಿ ಸಾಕಷ್ಟು ಕುತೂಹಲ ಮೂಡಿಸಿದೆ. ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಾತನಾಡಿರುವ ಮೈಕಲ್ ವಾನ್ ವಿಶ್ವ ಕ್ರಿಕೆಟ್‌ನಲ್ಲಿ ಪಾಲಿಸ್ತಾನ ಸೂಪರ್ ಲೀಗ್ ಎರಡನೇ ಅತ್ಯುತ್ತಮ ಕ್ರಿಕೆಟ್ ಲೀಗ್ ಆಗಿದೆ ಎಂದಿದ್ದಾರೆ.
ಹಾಗಾದರೆ ಮೈಕಲ್ ವಾನ್ ಪ್ರಕಾರ ಮೊದಲ ಅತ್ಯುತ್ತಮ ಲೀಗ್ ಯಾವುದು ಎಂಬ ಬಗ್ಗೆಯೂ ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ. ಇದಕ್ಕೆ ನೇರವಾಗಿ ಉತ್ತರನ್ನು ಮೈಕಲ್ ವಾನ್ ನೀಡದಿದ್ದರೂ ತಮ್ಮ ಹೇಳಿಕೆಯಲ್ಲಿಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್‌ಗಿಂತ ಪಾಕಿಸ್ತಾನ ಪ್ರೀಮಿಯರ್ ಲೀಗ್ ಹೆಚ್ಚು ದೂರದಲ್ಲಿಲ್ಲ ಎನ್ನುವ ಮೂಲಕ ಒಲ್ಲದ ಮನಸ್ಸಿನಿಂದಲೇ ಮೈಕಲ್ ವಾನ್ ಐಪಿಎಲ್ ತಮ್ಮ ಪ್ರಕಾರ ಕೂಡ ಮೊದಲ ಸ್ಥಾನದಲ್ಲಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಸದ್ಯ ಪಾಕಿಸ್ತಾನ ಸೂಪರ್ ಲೀಗ್‌ನ 7ನೇ ಆವೃತ್ತಿ ನಡೆಯುತ್ತಿದೆ. ಜನವರಿ 27ರಿಂದ ಆರಂಭವಾಗಿರುವ ಈ ಟೂರ್ನಿ ಫೆಬ್ರವರಿ 27ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯವಾಗಲಿದೆ. ಈ ಬಾರಿಯ ಆವೃತ್ತಿಯಲ್ಲಿ ಈವರೆಗೆ 7 ಪಂದ್ಯಗಳು ಆಯೋಜನೆಯಾಗಿದೆ. ಈವರೆಗೆ ನಡೆದಿರುವ ಪಂದ್ಯದಲ್ಲಿಯೇ ಶತಕ ಕೂಡ ದಾಖಲಾಗಿದ್ದು ಐದು ವಿಕೆಟ್‌ಗಳ ಗೊಂಚಲಿಗೂ ಟೂರ್ನಿ ಸಾಕ್ಷಿಯಾಗಿದೆ.
ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಲು ಮೈಕಲ್ ವಾನ್ ಟ್ವಿಟ್ಟರ್ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಟ್ವೀಟ್ ಮಾಡುವ ಮೂಲಕ ವಾನ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಲೀಗ್‌ನಲ್ಲಿ ಆಡುವ ಕ್ರಿಕೆಟ್‌ನ ಗುಣಮಟ್ಟದ ದೃಷ್ಟಿಯಿಂದ ಪಾಕಿಸ್ತಾನ ಸೂಪರ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ಗಿಂತ ಹೆಚ್ಚು ದೂರದಲ್ಲಿಲ್ಲ ಎಂದು ಮೂಕಲ್ ವಾನ್ ಈ ಟ್ವೀಟ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಗೆ ಮುನ್ನ ಹರಾಜು ಪ್ರಕ್ರಿಯೆ ಬಗ್ಗೆ ಸಾಕಷ್ಟು ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಮಂಗಳವಾರ ಬಿಸಿಸಿಐ ಹರಾಜಿನಲ್ಲಿ ಭಾಹಿಯಾಗಲಿರುವ ಅಂತಿಮ 590 ಆಟಗಾರರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಹರಾಜು ಪ್ರಕ್ರಿಯೆಗೆ ಇನ್ನಿ ಕೇವಲ 10 ದಿನಗಳು ಮಾತ್ರವೇ ಬಾಕಿಯಿದೆ. ಈ ಬಾರಿಯ ಐಪಿಎಲ್‌ಗೆ ಎರಡು ತಂಡಗಳು ಸೇರ್ಪಡೆಯಾಗಿರುವ ಕಾರಣ ಹರಾಜು ಪ್ರಕ್ರಿಯೆ ಮತ್ತಷ್ಟು ರೋಚಕವಾಗಿರುವುದರಲ್ಲಿ ಅನುಮಾನವಿಲ್ಲ. ಬೆಂಗಳೂರಿನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು ವಿಶ್ವದ ಪ್ರಮುಖ ಆಟಗಾರರು ಈ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.