ಗೆಲ್ಲಲು ಇನ್ನು ಎಷ್ಟು ರನ್ ಹೊಡಿಬೇಕು? ಅಬ್ಬಾ.. ಪಂಜಾಬ್ ಕಿಂಗ್ಸ್ ದಾಖಲೆಯ ರನ್ ಚೇಸ್
ದಾಖಲೆಯ ರನ್ ಚೇಸ್ ಹೇಗೆ ಮಾಡಬೇಕು ಎಂಬುದನ್ನು ಕಲಿಯಬೇಕಾದ್ರೆ 19ನೇ ಆವೃತ್ತಿಯ ಐಪಿಎಲ್‌ನ 35ನೇ ಪಂದ್ಯವನ್ನು ನೋಡಬೇಕು. ದೊಡ್ಡ ಮೊತ್ತವನ್ನು ಕಲೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಪಂಜಾಬ್ ಕಿಂಗ್ಸ್ ಆಡಿದ ಮೊದಲ ಎಸೆತದಿಂದಲೇ ಗೆಲುವಿನ ಜೋಶ್‌ನಿಂದಲೇ ಬ್ಯಾಟ್ ಮಾಡಿತು. ಪಂಜಾಬ್ ಕಿಂಗ್ಸ್ ದಾಖಲೆಯ ರನ್ ಚೇಸ್ ಮಾಡಿ ಬೀಗಿತು. ಐಪಿಎಲ್ ಇತಿಹಾಸದಲ್ಲಿ ದೊಡ್ಡ ಮೊತ್ತವನ್ನು ಚೇಸ್ ಮಾಡಿದ ದಾಖಲೆ ಬರೆಯಿತು. ಅಲ್ಲದೆ ಐಪಿಎಲ್ 2026ರಲ್ಲಿ ತನ್ನ ಅಜೇಯ ಓಟವನ್ನು ಪಂಜಾಬ್ ಕಿಂಗ್ಸ್ ಮುಂದುವರೆಸಿತು.
ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 264 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕರಾದ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಜೋಡಿ ಪವರ್ ಫುಲ್ ಬ್ಯಾಟಿಂಗ್ ನಡೆಸಿತು. ಈ ಜೋಡಿ ಪವರ್ ಪ್ಲೇನಲ್ಲಿ ರನ್ ಮಹಲ್ ಕಟ್ಟಿತು. ಈ ಜೋಡಿ ಪವರ್ ಪ್ಲೇನಲ್ಲಿ ಶತಕದ ಜೊತೆಯಾಟವನ್ನು ನೀಡಿತು. ಪ್ರಿಯಾಂಶ್ ಆರ್ಯ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಔಟ್ ಆದರು. ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಜೋಡಿ 6.5 ಓವರ್‌ಗಳಲ್ಲಿ 126 ರನ್ ಸೇರಿಸಿತು.

ಸ್ಫೋಟಕ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ ಅಬ್ಬರಿಸಿದರು. ದಾಖಲೆಯ ರನ್ ಚೇಸ್ ಮಾಡುವ ಅಡಿಪಾಯವನ್ನು ಹಾಕಿಕೊಟ್ಟ ಪ್ರಭ್‌ಸಿಮ್ರನ್ ಸಿಂಗ್ ಆರ್ಭಟಿಸಿದರು. ಇವರು 292ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಇವರು 26 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿ ಅಬ್ಬರಿಸಿದರು. ಮಧ್ಯಮ ಕ್ರಮಾಂಕದ ಕೂಪರ್ ಕೊನೋಲಿ (17) ರನ್ ಕಲೆ ಹಾಕುವಲ್ಲಿ ವಿಫಲರಾದರು.
ನಾಲ್ಕನೇ ವಿಕೆಟ್‌ಗೆ ನೇಹಲ್ ವಧೇರಾ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ಈ ವೇಳೆ ನೇಹಾಲ್ 25 ರನ್ ಬಾರಿಸಿದ್ದಾಗ ವಿಪ್ರಜ್ ನಿಗಮ್ ತೋಡಿದ ಖೆಡ್ಡಾಗೆ ಬಲಿಯಾದರು.
ಗೆಲುವಿನ ಉಡುಗೊರೆ ನೀಡಿದ ಕರುಣ್ ನಾಯರ್
ಶ್ರೇಯಸ್ ಅಯ್ಯರ್ ಅವರು 28 ಹಾಗು 35 ರನ್ ಬಾರಿಸಿದ್ದಾಗ ಕರುಣ್ ನಾಯರ್ ಎರಡು ಕ್ಯಾಚ್ ಕೈ ಬಿಟ್ಟರು. ಇವರು ಬಿಟ್ಟ ಈ ಕ್ಯಾಚ್‌ಗಳು ಪಂದ್ಯಗಳು ಪಂಜಾಬ್ ಗೆಲ್ಲಲು ಕಾರಣವಾಯಿತು. ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಈ ಪಂದ್ಯದಲ್ಲಿ 36 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 71 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 265 ರನ್ ಕಲೆ ಹಾಕಿ ದಾಖಲೆ ಬರೆಯಿತು.
ಐಪಿಎಲ್‌ನಲ್ಲಿ ದಾಖಲೆಯ ರನ್ ಚೇಸ್ ಮಾಡಿದ ತಂಡಗಳ ಪಟ್ಟಿ
| ಸಂಖ್ಯೆ | ಗುರಿ (Target) | ಬೆನ್ನಟ್ಟಿದ ತಂಡ | ವಿರುದ್ಧ | ವರ್ಷ |
|---|---|---|---|---|
| 1 | 265 | ಪಂಜಾಬ್ ಕಿಂಗ್ಸ್ | ಡೆಲ್ಲಿ ಕ್ಯಾಪಿಟಲ್ಸ್ | 2026 |
| 2 | 262 | ಪಂಜಾಬ್ ಕಿಂಗ್ಸ್ | ಕೋಲ್ಕತ್ತಾ ನೈಟ್ ರೈಡರ್ಸ್ | 2024 |
| 3 | 246 | ಸನ್ ರೈಸರ್ಸ್ ಹೈದರಾಬಾದ್ | ಪಂಜಾಬ್ ಕಿಂಗ್ಸ್ | 2025 |
| 4 | 228 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಲಕ್ನೋ ಸೂಪರ್ ಜೈಂಟ್ಸ್ | 2025 |
| 5 | 224 | ರಾಜಸ್ಥಾನ್ ರಾಯಲ್ಸ್ | ಕೋಲ್ಕತ್ತಾ ನೈಟ್ ರೈಡರ್ಸ್ | 2024 |
ರಾಹುಲ್ ಶತಕ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಪತುಮ್ ನಿಸ್ಸಂಕಾ (11) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆದರೆ ಎರಡನೇ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ನಿತೀಶ್ ರಾಣಾ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ 220 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ನಿತೀಶ್ ರಾಣಾ 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ 91 ರನ್ ಬಾರಿಸಿದರು.
ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ 67 ಎಸೆತಗಳಲ್ಲಿ 16 ಬೌಂಡರಿ, 9 ಸಿಕ್ಸರ್ ಸಹಾಯದಿಂದ ಅಜೇಯ 152 ರನ್ ಬಾರಿಸಿದರು. ಇವರ ಕ್ಲಾಸಿಕ್ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 264 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications