18ನೇ ಆವೃತ್ತಿಯ 59ನೇ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ 10 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಪೂರ್ಣ ಎರಡು ಅಂಕಗಳನ್ನು ಕಲೆ ಹಾಕಿ, ಪ್ಲೇ ಆಫ್‌ಗೆ ಹತ್ತಿರವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 209 ರನ್ ಸೇರಿಸಿತು. ಈ ಗೆಲುವಿನೊಂದಿಗೆ ಪಂಜಾಬ್ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಆರಂಭಿಕ ಆಟಗಾರರಾದ ಪ್ರಿಯಾಂಶ್ ಆರ್ಯ (9), ಮಿಚೆಲ್ ಓವನ್ (0) ದೊಡ್ಡ ರನ್ ಕಲೆ ಹಾಕುವಲ್ಲಿ ವಿಫಲರಾದರು. ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಪ್ರಭಸಿಮ್ರನ್ ಸಿಂಗ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 21 ರನ್ ಬಾರಿಸಿ ತುಷಾರ್ ದೇಶಪಾಂಡೆ ಅವರಿಗೆ ಕ್ಯಾಚ್ ನೀಡಿದರು.
34 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನೆಹಾಲ್ ವಧೇರಾ, ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ ನೀಡಿದ ಭರ್ಜರಿ ಜೊತೆಯಾಟದ ಕಾರಣದಿಂದಲೇ ಪಂಜಾಬ್ ಕಿಂಗ್ಸ್ ಸವಾಲಿನ ಮೊತ್ತದತ್ತ ಮುಖ ಮಾಡಲು ನೆರವಾಯಿತು. ವಧೇರಾ, ಶ್ರೇಯಸ್ ಜೋಡಿ 44 ಎಸೆತಗಳಲ್ಲಿ 67 ರನ್ ಸೇರಿಸಿತು. ಶ್ರೇಯಸ್ ಅಯ್ಯರ್ 5 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಔಟ್ ಆದರು.
ಶ್ರೇಯಸ್ ಅಯ್ಯರ್ ಔಟ್ ಆಗ್ತಾ ಇದ್ದಂತೆ ಬ್ಯಾಟ್ ಮಾಡಲು ಬಂದ ಶಶಾಂಕ್ ಸಿಂಗ್, ನಮನ್ ವಧೆರಾ ಅವರಿಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 33 ಎಸೆತಗಳಲ್ಲಿ 58 ರನ್ ಸಿಡಿಸಿತು. ಈ ವೇಳೆ ನಮನ್ ವಧೇರಾ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿ ಔಟ್ ಆದರು. ಆರನೇ ವಿಕೆಟ್‌ಗೆ ಶಶಾಂಕ್ ಸಿಂಗ್ ಹಾಗೂ ಅಜ್ಮತುಲ್ಲಾ ಓಮರಜಾಯಿ ಉತ್ತಮ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಸಹ ಡೆತ್ ಓವರ್‌ಗಳಲ್ಲಿ ಅಬ್ಬರಿಸಿತು. ಈ ಜೋಡಿ ಸಮಯೋಚಿತ ಆಟದ ಪರಿಣಾಮ ಪಂಜಾಬ್ 219 ರನ್ ಕಲೆ ಹಾಕಿತು. 6ನೇ ವಿಕೆಟ್‌ಗೆ ಈ ಜೋಡಿ 24 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿದರು.
ಬೃಹತ ಮೊತ್ತವನ್ನು ಹಿಂಬಾಲಿಸಿದ ರಾಜಸ್ಥಾನ ತಂಡದ ಆರಂಭ ಭರ್ಜರಿಯಾಗಿತ್ತು. ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಪವರ್ ಪ್ಲೇನಲ್ಲಿ ಪವರ್ ಫುಲ್ ಆಟದ ಪ್ರದರ್ಶನ ನೀಡಿದ ರಾಜಸ್ಥಾನ 4.5 ಓವರ್‌ಗಳಲ್ಲಿ 76 ರನ್ ಸಿಡಿಸಿತು. ವೈಭವ್ ಸೂರ್ಯವಂಶಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿದರು. ಯಶಸ್ವಿ ಜೈಸ್ವಾಲ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 50 ರನ್ ಸಿಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ (20), ರಿಯಾನ್ ಪರಾಗ್ (13), ಶ್ರಿಮ್ರೋನ್ ಹೆಟ್ಮೆಯರ್ (11) ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಧ್ರುವ್ ಜುರೇಲ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿ ಔಟ್ ಆದರು.
ಪಂಜಾಬ್ ಹರ್ಪಿತ್ ಬ್ರಾರ್ 3, ಅಜ್ಮುತುಲ್ಲಾ ಹಾಗೂ ಮಾರ್ಕೊ ಜಾನ್ಸನ್ ತಲಾ 2 ವಿಕೆಟ್ ಪಡೆದರು.