ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿವೆ. ಈ ವೇಳೆ ಅಗ್ರ ಎರಡು ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ಹಾಗೂ ಆರ್‌ಸಿಬಿ ತಂಡಗಳು ತಾವಾಡಿದ ಹಿಂದಿನ ಪಂದ್ಯಗಳನ್ನು ಸೋತಿವೆ. ಈಗ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪಂಜಾಬ್, ಅಗ್ರ ಸ್ಥಾನಕ್ಕೆ ಏರಲು ಫೈಟ್ ನಡೆಸುತ್ತಿದೆ. 18ನೇ ಆವೃತ್ತಿಯ 66ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಡೆಲ್ಲಿ, ಪಂಜಾಬ್ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ ಒಟ್ಟು 34 ಪಂದ್ಯಗಳಲ್ಲಿ ಮುಖಾಮುಖಿ ನಡೆಸಿವೆ. ಈ ವೇಳೆ ಕ್ಯಾಪಿಟಲ್ಸ್ 16, ಕಿಂಗ್ಸ್ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಪಿಚ್ ಬ್ಯಾಟರ್‌ಗಳಿಗೆ ಸಹಾಯವನ್ನು ನೀಡಲಿದೆ. ಹೀಗಾಗಿ ಈ ಪಂದ್ಯ ರೋಚಕತೆ ಹುಟ್ಟಿಸಿದೆ. ಪಂಜಾಬ್ ತಂಡ ಸದ್ಯ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದು 2 ಅಂಕ ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಿಂಗ್ಸ್ ತಂಡದ್ದಾಗಿದೆ. ಡೆಲ್ಲಿ ಸಹ ಈ ಪಂದ್ಯವನ್ನು ಪ್ರತಿಷ್ಠೆಗಾಗಿ ಆಡುತ್ತಿದೆ.

ಪಂಜಾಬ್ ಕಿಂಗ್ಸ್ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಈ ವೇಳೆ ಈ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ನೆರವಾಗುತ್ತಿದ್ದಾರೆ. ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ಜೋಡಿ ಭರ್ಜರಿ ಆಟವನ್ನು ಆಡುತ್ತಿದ್ದು, ಮ್ಯಾನೇಜ್ಮೆಂಟ್ ಭರವಸೆ ಉಳಿಸಿಕೊಂಡಿದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಜೋಶ್ ಇಂಗ್ಲೀಷ್ ಹಾಗೂ ಶ್ರೇಯಸ್ ಅಯ್ಯರ್, ನೇಹಾಲ್ ವಧೇರಾ ತಮ್ಮ ಶಿಸ್ತು ಬದ್ಧ ಆಟದ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಆಲ್‌ರೌಂಡರ್‌ಗಳು ತಮ್ಮ ಮೇಲಿನ ನಂಬಿಕೆಗೆ ಪೂರಕವಾಗಿ ಆಡಬೇಕಿದೆ.
ವೇಗದ ಬೌಲರ್‌ಗಳಾದ ಮಾರ್ಕೋ ಜಾನ್ಸನ್, ಕೈಲ್ ಜೇಮಿನ್ಸ್, ಅರ್ಷದೀಪ್ ಸಿಂಗ್ ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಿ ಜಯದಲ್ಲಿ ಮಿಂಚಬೇಕಿದೆ. ಇನ್ನು ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಹಾಲ್, ಹರ್ಪಿತ್ ಬ್ರಾರ್ ಮಿಡ್ಲ್ ಓವರ್‌ಗಳಲ್ಲಿ ಶಿಸ್ತು ಬದ್ಧ ದಾಳಿ ಸಂಘಟಿಸಿದರೆ ಜಯ ಸಾಧಿಸಬಹುದು.

ಐಪಿಎಲ್ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್, ಬಳಿಕ ಗೆಲುವಿನ ಲಯಕ್ಕೆ ಮರಳುವಲ್ಲಿ ವಿಫಲವಾಗಿತ್ತು. ಹೀಗಾಗಿ ಡೆಲ್ಲಿ ಈಗಾಗಲೇ ಪ್ಲೇ ಆಫ್‌ನಿಂದ ದೂರ ಸರಿದಿದೆ. ಆದರೆ ಪಂಜಾಬ್ ವಿರುದ್ದದ ಪಂದ್ಯವನ್ನು ಪ್ರತಿಷ್ಠೆಗಾಗಿ ಆಡುತ್ತಿದೆ. ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಕೆಎಲ್ ರಾಹುಲ್ ಆಧಾರ. ಕನ್ನಡಿಗ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದು ಭರವಸೆ ಮೂಡಿಸಿದ್ದಾರೆ. ಫಾಫ್ ಡುಪ್ಲೇಸಿಸ್, ಆಶುತೋಷ್ ಶರ್ಮಾ, ಟ್ರಿಸ್ಟನ್ ಸ್ಟಬ್ಸ್ ಬಿಗ್ ಇನಿಂಗ್ಸ್ ಕಟ್ಟಿದರೆ ಗೆಲುವು ಸಾಧ್ಯ.
ದುಷ್ಮಂತ ಚಮೀರ, ಮುಸ್ತಫಿಜುರ್ ರೆಹಮಾನ್, ಮುಖೇಶ್ ಕುಮಾರ್ ತಮ್ಮ ವೇಗದ ಬೌಲಿಂಗ್‌ನಿಂದ ಎದುರಾಳಿಗಳನ್ನು ಕಾಡಬೇಕಿದೆ. ಇನ್ನು ಮಧ್ಯದ ಓವರ್‌ಗಳಲ್ಲಿ ವಿಪ್ರಜ್ ನಿಗಮ್, ಕುಲ್‌ದೀಪ್ ಯಾದವ್ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬೇಕಿದೆ.