ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ರಿಟೇನ್ಷನ್ ಲೀಸ್ಟ್ ಬಿಡುಗಡೆ ಮಾಡಿದ್ದು, ಅಚ್ಚರಿಯ ಮುಖಗಳಿಗೆ ಮಣೆ ಹಾಕಿದೆ. ತಂಡದಲ್ಲಿ ಯಾವುದೇ ಒಬ್ಬ ಕ್ಯಾಪ್ಡ್ ಪ್ಲೇಯರ್‌ಗೆ ಸ್ಥಾನ ನೀಡಿಲ್ಲ. ಉಳಿಸಿಕೊಂಡ ಇಬ್ಬರೂ ಆಟಗಾರರು ಅನ್‌ಕ್ಯಾಪ್ಡ್ ಪ್ಲೇಯರ್ ಆಗಿದ್ದಾರೆ. ಪಂಜಾಬ್ ಈ ಬಾರಿ ಐಪಿಎಲ್‌ಗೆ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯನ್ನು ಹೊಂದಿದೆ.
ಪಂಜಾಬ್ ತಂಡದ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕವಾದಾಗಿನಿಂದಲೂ ತಂಡದಲ್ಲಿ ಬದಲಾವಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ ಯುವಕರ ಮೇಲೆ ತಂಡ ನಂಬಿಕೆಯನ್ನು ಇಟ್ಟಿದ್ದು, ಉಳಿದ ಎಲ್ಲ ಆಟಗಾರರನ್ನು ಹರಾಜು ಅಂಗಳಕ್ಕೆ ಬಿಟ್ಟಿದೆ. ಈ ವೇಳೆ ಪಂಜಾಬ್ ನಾಯಕ ಶಿಖರ್ ಧವನ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ನಾಯಕನ ಹುಡುಕಾಟ ಸಹ ಚುರುಕಾಗಿದೆ.

ಪಂಜಾಬ್ ನಾಯಕನ ಸ್ಥಾನವನ್ನು ತುಂಬ ಬಲ್ಲ ಮೂವರು ಆಟಗಾರರನ್ನು ತನ್ನ ಬಕೇಟ್ ಲೀಸ್ಟ್‌ನಲ್ಲಿ ಇಟ್ಟುಕೊಂಡಿದೆ. ಈ ಮೂವರು ಆಟಗಾರರು ಈಗಾಗಲೇ ಐಪಿಎಲ್‌ನಲ್ಲಿ ನಾಯಕತ್ವ ಗುಣಗಳನ್ನು ತೋರಿಸಿದ್ದಾರೆ. ಇದರಲ್ಲಿ ಇಬ್ಬರು ತಾವಾಡಿದ ಫ್ರಾಂಚೈಸಿಗೆ ಐಪಿಎಲ್ ಚಾಂಪಿಯನ್ ಪಟ್ಟದ ಮುಕುಟ ಸಹ ತೊಡಿಸಿದ್ದಾರೆ. ಇನ್ನೋಬ್ಬ ಪ್ಲೇಯರ್ ಕೋಚ್ ರಿಕಿ ಪಾಂಟಿಂಗ್‌ಗೆ ಫೆವರೀಟ್.
ಪಂಜಾಬ್ ನಾಯಕನ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವ ಹೆಸರು ಡೇವಿಡ್ ವಾರ್ನರ್. ಇವರಿಗೆ ಪಂಜಾಬ್ ಮಣೆ ಹಾಕಲು ಸಿದ್ಧತೆ ನಡೆಸಿದೆ. ವಾರ್ನರ್ ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ದೆಹಲಿಗಿಂತ ಮೊದಲು ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರು. 2016 ರಲ್ಲಿ, ವಾರ್ನರ್ ಐಪಿಎಲ್ ಫೈನಲ್‌ನಲ್ಲಿ RCB ಅನ್ನು ಸೋಲಿಸುವ ಮೂಲಕ ಎಸ್‌ಆರ್‌ಎಚ್‌ಗೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ಕಟ್ಟಿದ್ದರು. ಇವರು ಸಹ ಈಗ ಹರಾಜು ಅಂಗಳದಲ್ಲಿದ್ದು ಪಂಜಾಬ್ ಇವರ ಮೇಲೆ ಬಾಜಿ ಕಟ್ಟಬಹುದು.
ಪಂಜಾಬ್ ನಾಯಕನ ಲೀಸ್ಟ್‌ನಲ್ಲಿರುವ ಮತ್ತೊಂದು ಹೆಸರು ಶ್ರೇಯಸ್ ಅಯ್ಯರ್. ಇವರ ನಾಯಕತ್ವದಲ್ಲಿ ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಪ್ಲೇಯರ್‌ಗೆ ಕೆಕೆಆರ್ ಗೇಟ್ ಪಾಸ್ ನೀಡಿದೆ. ಪಂಜಾಬ್ ಕಿಂಗ್ಸ್ ಅಯ್ಯರ್ ಮೇಲೆ ಹಣದ ಹೊಳೆ ಹರಿಸಬಹುದು. ಐಪಿಎಲ್‌ನಲ್ಲಿ ಅಯ್ಯರ್ ಅವರ ಅಂಕಿ ಅಂಶಗಳು ಕೂಡ ಅತ್ಯುತ್ತಮವಾಗಿವೆ. ಇವರು ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಸದ್ಯ ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಬಹುದು ಎಂದು ಕೇಳಿ ಬರುತ್ತಿರುವ ಹೆಸರು ರಿಷಭ್ ಪಂತ್. 2016 ರಿಂದ 2024 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದ ರಿಷಬ್ ಪಂತ್ ಮೇಲೆ ಪಂಜಾಬ್ ಕಣ್ಣಿಟ್ಟಿದೆ. ಇವರು ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಲು ಹೆಸರುವಾಸಿ. ಅಲ್ಲದೆ ವಿಕೆಟ್ ಹಿಂದೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಪಂಜಾಬ್ ಹರಾಜಿನಲ್ಲಿ ಪಂತ್ ಅವರಿಗೆ ಬಾಜಿ ಕಟ್ಟಲು ಸಿದ್ಧತೆ ನಡೆಸಿದೆ. ಅಲ್ಲದೆ ಪಂತ್ ಹಾಗೂ ಪಾಂಟಿಂಗ್ ನಡುವೆ ಒಳ್ಳೆಯ ಬಾಂಧವ್ಯ ಇದೆ.