ಬೆಂಗಳೂರು, ಆಗಸ್ಟ್ 25: ಆಲೂರಿನಲ್ಲಿ ಶನಿವಾರ ನಡೆದ ಚತುಷ್ಕೋನ ಸರಣಿಯ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಭಾರತ ಬಿ ತಂಡವು ಭಾರತ ಎ ತಂಡವನ್ನು ಸೋಲಿಸಿದರೆ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡವು ದಕ್ಷಿಣ ಆಫ್ರಿಕಾ ಎ ತಂಡವನ್ನು ಸೋಲಿಸಿತು.
ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಆರಂಭಿಕ ಆಟಗಾರ ಕನ್ನಡಿಗ ಆರ್ ಸಮರ್ಥ್ ಮತ್ತೆ ವೈಫಲ್ಯ ಅನುಭವಿಸಿದರು. ಕರ್ನಾಟಕದವರೇ ಆದ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು.

ಸತತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಎ ತಂಡಕ್ಕೆ ಅನುಭವಿ ಅಂಬಾಟಿ ರಾಯುಡು ಆಸರೆಯಾದರು. ಕೊನೆಯಲ್ಲಿ ಸಂಜು ಸ್ಯಾಮ್ಸನ್ 32 (52) ಮತ್ತು ಕೆ. ಗೌತಮ್ 35 (32) ಅವರ ಕಾಣಿಕೆಯ ನೆರವಿನಿಂದ ತಂಡ ಇನ್ನೂರರ ಗಡಿ ದಾಟಿತು.
ಒಂದು ಓವರ್ ಬಾಕಿ ಇರುವಾಗಲೇ ಎ ತಂಡ 217 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ಈ ಪಂದ್ಯದಲ್ಲಿಯೂ ಗಮನ ಸೆಳೆದರು.
ಸಾಧಾರಣ ಗುರಿ ಬೆನ್ನತ್ತಿದ ಬಿ. ತಂಡಕ್ಕೆ ಉತ್ತಮ ಆರಂಭ ದೊರಕಿತು. ದಕ್ಷಿಣ ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಬೇಗನೆ ಔಟಾಗಿದ್ದ ಮಯಂಕ್ ಅಗರ್ವಾಲ್ ತಮ್ಮ ನೈಜ ಆಟ ಪ್ರದರ್ಶಿಸಿದರು. ಅಬ್ಬರದ ಆಟವಾಡಿದ ಮಯಂಕ್, 114 ಎಸೆತಗಳಲ್ಲಿ 124 ರನ್ ಚಚ್ಚಿದರು. ಅದರಲ್ಲಿ 14 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳಿದ್ದವು.
ಅವರಿಗೆ ಇಶಾನ್ ಕಿಶಾನ್ 25 (37) ಮತ್ತು ಶುಭ್‌ಮನ್ ಗಿಲ್ 42 (55) ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ಮನೀಶ್ ಪಾಂಡೆ ಮತ್ತು ಕೇದಾರ್ ಜಾಧವ್ ಗೆಲುವಿನ ಶಾಸ್ತ್ರ ಮುಗಿಸಿದರು.

ಸಂಕ್ಷಿಪ್ತ ಸ್ಕೋರ್
ಭಾರತ ಎ: 217/10 (49) ಅಂಬಾಟಿ ರಾಯುಡು 48, ಸಂಜು ಸ್ಯಾಮ್ಸನ್ 32, ಕೆ. ಗೌತಮ್ 35, ಪ್ರಸಿದ್ಧ್ ಕೃಷ್ಣ 50/4, ಶ್ರೇಯಸ್ ಗೋಪಾಲ್ 38/2
ಭಾರತ ಬಿ: 218/3 (41.1) ಮಯಂಕ್ ಅಗರ್ವಾಲ್ 124, ಇಶಾನ್ ಕಿಶನ್ 25, ಶುಭ್‌ಮನ್ ಗಿಲ್ 42, ಮನೀಶ್ ಪಾಂಡೆ 21*, ಖಲೀಲ್ ಅಹ್ಮದ್ 33/2, ದೀಪಕ್ ಚಾಹರ್ 38/1
ಫಲಿತಾಂಶ: ಭಾರತ ಬಿ ತಂಡಕ್ಕೆ ಏಳು ವಿಕೆಟ್ ಗೆಲುವು
ಪಂದ್ಯ ಶ್ರೇಷ್ಠ: ಮಯಂಕ್ ಅಗರ್ವಾಲ್
ಆಸ್ಟ್ರೇಲಿಯಾ ಎ ತಂಡಕ್ಕೆ ಜಯ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಯಕ ಟ್ರಾವಿಸ್ ಹೆಡ್ ಅವರ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ಎ, ದಕ್ಷಿಣ ಆಫ್ರಿಕಾ ಎ ವಿರುದ್ಧ 32 ರನ್‌ಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, 322 ರನ್‌ಗಳ ಬೃಹತ್ ಗುರಿ ನೀಡಿತು. ನಾಯಕ ಟ್ರಾವಿಸ್ ಹೆಡ್ 110 (117) ಬಾರಿಸಿದರು. ಅವರಿಗೆ ಮಾರ್ನಸ್ ಲ್ಯಾಬುಸ್‌ಚಗ್ನೆ ಮತ್ತು ಡಿ ಆರ್ಸಿ ಶಾರ್ಟ್ ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ಮ್ಯಾಟ್ ರೆನ್‌ಶಾ 29 ಎಸೆತಗಳಲ್ಲಿ 42 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಉತ್ತಮ ಆರಂಭ ದೊರೆತರೂ ದಕ್ಷಿಣ ಆಫ್ರಿಕಾ ಎ ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ನಾಯಕ ಖಾಯಾ ಜೊಂಡೋ 117 (104) ಅಬ್ಬರದ ಶತಕ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಏಳು ಭರ್ಜರಿ ಸಿಕ್ಸರ್‌ಗಳೂ ಸೇರಿದ್ದವು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ತಂಡ ಒತ್ತಡಕ್ಕೆ ಸಿಲುಕಿತು. ಜೊಂಡೋ ಹೋರಾಟ ವ್ಯರ್ಥವಾಯಿತು.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಎ: 322/5 (50) ಟ್ರಾವಿಸ್ ಹೆಡ್ 110, ಮಾರ್ನಸ್ ಲ್ಯಾಬುಸ್‌ಚಗ್ನೆ 65, ಡಿ. ಆರ್ಸಿ ಶಾರ್ಟ್ 49, ಮ್ಯಾಟ್ ರೆನ್ ಶಾ 42*, ಸಿಸಾಂಡ ಮಗಲಾ 59/2, ಶಾನ್ ವೊನ್ ಬರ್ಗ್ 54/1
ದಕ್ಷಿಣ ಆಫ್ರಿಕಾ ಎ: 290/10 (48.4) ಖಾಯಾ ಜೊಂಡೋ 117, ಗಿಹಾಹ್ನ್ ಕ್ಲೊಯೆಟೆ 50, ರಾಬರ್ಟ್ ಫ್ರೈಲಿಂಕ್ 30, ಸರೆಲ್ ಎರ್ವಿ 37, ಮಿಚೆಲ್ ಸ್ವೆಪ್ಸನ್ 40/3, ಟ್ರಾವಿಸ್ ಹೆಡ್ 25/2
ಫಲಿತಾಂಶ: ಆಸ್ಟ್ರೇಲಿಯಾ ಎ ತಂಡಕ್ಕೆ 32 ರನ್ ಗೆಲುವು
ಪಂದ್ಯಶ್ರೇಷ್ಠ: ಟ್ರಾವಿಸ್ ಹೆಡ್
ಮುಂದಿನ ಪಂದ್ಯಗಳು: ಆಗಸ್ಟ್ 27
ಭಾರತ ಎ vs ದಕ್ಷಿಣ ಆಫ್ರಿಕಾ ಎ- ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಭಾರತ ಬಿ vs ಆಸ್ಟ್ರೇಲಿಯಾ ಎ- ಆಲೂರು ಮೈದಾನ