ಭಾರತ ಹಾಗೂ ಬಾಂಗ್ಲಾದೇಶಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಇದೇ 19 ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ. ಪ್ರವಾಸಿ ಭಾರತದ ಪ್ರವಾಸದ ವೇಳೆ ಬಾಂಗ್ಲಾದೇಶ ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ತವರಿನಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗು ಬಡೆದಿರುವ ಬಾಂಗ್ಲಾ ಉತ್ಸಾಹದಲ್ಲಿದೆ.
ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗೆ ಭಾರತ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಘೋಷಿಸಿದ ತಂಡದಲ್ಲಿ ಯುವ ಆಟಗಾರರು ಹಾಗೂ ಅನುಭವಿ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಆಟಗಾರರಲ್ಲಿ ಹಲವರು ಮ್ಯಾಚ್ ವಿನ್ನರ್‌ಗಳಿದ್ದಾರೆ. ಈ ವೇಳೆ ಎಲ್ಲರ ಕಣ್ಣು ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳ ಮೇಲೆ ನೆಟ್ಟಿದೆ. ತವರಿನಲ್ಲಿ ಅಬ್ಬರಿಸಲು ಆರ್.ಅಶ್ವಿನ್ ರೆಡಿ ಆಗಿದ್ದು, ರವೀಂದ್ರ ಜಡೇಜಾ ಸಹ ಸ್ಪಿನ್ ಪಿಚ್‌ನ ಲಾಭ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಸರಣಿಯಲ್ಲಿ ಉಭಯ ಸ್ಪಿನ್ ಬೌಲರ್‌ಗಳ ದಾಖಲೆಯ ಸನಿಹದಲ್ಲಿದ್ದಾರೆ. ಚೆನ್ನೈನ ಅಶ್ವಿನ್ ಟೆಸ್ಟ್‌ನಲ್ಲಿ 500 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿ ಬೀಗಿದ್ದಾರೆ. ಈಗ ಇವರ ಕಣ್ಣು ವೆಸ್ಟ್ ಇಂಡೀಸ್ ಸ್ಟಾರ್ ಬೌಲರ್ ಕರ್ಟ್ನಿ ವಾಲ್ಷ್ ಮತ್ತು ಆಸ್ಟ್ರೇಲಿಯಾದ ಸ್ಪಿನ್ ನಾಥನ್ ಲಿಯಾನ್ ದಾಖಲೆಯ ಮೇಲೆ ನೆಟ್ಟಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಸ್ಪಿನ್ ಜಾದು ನಡೆಸಿದರೆ, ಅವರು ಈ ಇಬ್ಬರೂ ಸ್ಟಾರ್ ಆಟಗಾರರ ದಾಖಲೆಯನ್ನು ಅಳಿಸಿ ಹಾಕಬಹುದು.
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಅಶ್ವಿನ್. ಇವರು 100 ಟೆಸ್ಟ್ ಪಂದ್ಯಗಳಲ್ಲಿ 516 ವಿಕೆಟ್ಗಳನ್ನು ಕಬಳಿಸಿದ್ದಾರೆ. ನಾಥನ್ ಲಿಯಾನ್ ಏಳನೇ ಸ್ಥಾನದಲ್ಲಿದ್ದಾರೆ. ಇವರು ಟೆಸ್ಟ್‌ನಲ್ಲಿ 519 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಯಾನ್ ಟೆಸ್ಟ್‌ನಲ್ಲಿ 530 ವಿಕೆಟ್‌ಗಳನ್ನು ಪಡೆದಿದ್ದಾರೆ.

ಭಾರತದ ಅನುಭವಿ ಸ್ಪಿನ್ನರ್ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಪಡೆದರೆ, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಳನೇ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.
ಟೀಮ್ ಇಂಡಿಯಾದ ಇನ್ನೋರ್ವ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಕೂಡ ಈ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಬಹುದು. ಜಡೇಜಾ ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಅವರು ಕಪಿಲ್ ದೇವ್ ಅವರ ದಾಖಲೆ ಮುರಿಯಬಹುದು. ಜಡೇಜಾ 213 ವಿಕೆಟ್‌ಗಳೊಂದಿಗೆ ಭಾರತದ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದು 5 ನೇ ಸ್ಥಾನದಲ್ಲಿದ್ದಾರೆ. ಆದರೆ, ಕಪಿಲ್ ದೇವ್ ಭಾರತದಲ್ಲಿ 219 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಆರು ವಿಕೆಟ್ ಪಡೆದರೆ ಜಡೇಜಾ ಕಪಿಲ್ ದೇವ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.