
ಅಡಿಲೇಡ್‌ನಲ್ಲಿ ನಡೆದ ಮೊದಲ ಟಸ್ಟ್ ಪಂದ್ಯದಲ್ಲಿ ಭಯಾನಕ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ಈ ಮೂಲಕ ಭಾರತೀಯ ಬೌಲರ್‌ಗಳ ಪೈಕಿ ಆರ್ ಅಶ್ವಿನ್ ಅಗ್ರ ಸ್ಥಾನಕ್ಕೇರಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಭಾರತೀಯ ಬೌಲರ್‌ಗಳ ಪೈಕಿ ವೇಗಿ ಜಸ್ಪ್ರೀತ್ ಬೂಮ್ರಾ ಅಗ್ರ ಸ್ಥಾನದಲ್ಲಿದ್ದರು. ಐಸಿಸಿ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ 9ನೇ ಸ್ಥಾನವನ್ನು ಹೊಂದಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ ಬಳಿಕ ಬೂಮ್ರಾ ಎರಡು ಸ್ಥಾನಗಳ ಕುಸಿತ ಕಂಡಿದ್ದಾರೆ.
ಬೂಮ್ರಾ ಅವರ ಈ ಕುಸಿತದಿಂದಾಗಿ ರ‍್ಯಾಂಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನವನ್ನು ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಜೊತೆಗೆ ಹಂಚಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 71 ರನ್ ನೀಡಿ 5 ವಿಕೆಟ್ ಕಬಳಿಸಿದ ಆರ್ ಅಶ್ವಿನ್ ಎರಡು ಸ್ಥಾನಗಳ ಏರಿಕೆ ಕಾಣುವಲ್ಲಿ ಯಶಸ್ವಿಯಾಗಿದ್ದು ಸದ್ಯ ಅವರು 9ನೇ ಸ್ಥಾನದಲ್ಲಿದ್ದಾರೆ.
ಮೊದಲ ಪಂದ್ಯದ ಬಳಿಕ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅತ್ಯಂತ ಹೆಚ್ಚಿನ ಗಳಿಕೆಯನ್ನು ಕಂಡಿದ್ದು ಆಸಿಸ್ ವೇಗಿ ಜೋಶ್ ಹ್ಯಾಜಲ್‌ವುಡ್. ಅಡಿಲೇಡ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್ ಭಾರತೀಯ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಧ್ವಂಸ ಮಾಡಿದ ಹ್ಯಾಜಲ್‌ವುಡ್ 8 ರನ್ ನೀಡಿ 5 ವಿಕೆಟ್ ಕಿತ್ತಿದ್ದರು. ಈಗ ಅವರು 5ನೇ ಸ್ಥಾನಕ್ಕೇರಿದ್ದಾರೆ. 2018ರ ಬಳಿಕ ಮೊದಲ ಬಾರಿಗೆ ಟಾಪ್ 5ರಲ್ಲಿ ಜ್ಯಾಜಲ್‌ವುಡ್ ಕಾಣಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ತ್ರಿವಳಿ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಮಾರಕ ದಾಳಿಯನ್ನು ಸಂಘಟಿಸಿ ಟೀಮ್ ಇಂಡಿಯಾ 36 ರನ್‌ಗೆ ಆಲೌಟ್ ಆಗುವಂತೆ ಮಾಡಿದರು. ಈ ಮೂವರು ಕೂಡ ಟಾಪ್ 7 ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ನಂಬರ್ 1 ಆಗಿದ್ದರೆ ಸ್ಟಾರ್ಕ್ 7ನೇ ಸ್ಥಾನದಲ್ಲಿದ್ದಾರೆ.