ಬೆಂಗಳೂರು, ಮಾರ್ಚ್ 09: ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬೆಂಗಳೂರು ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ಆಸರೆಯಾಗಿದ್ದು ಹಳೆ ವಿಚಾರ. ಅಶ್ವಿನ್ ಅವರು ಸರಣಿಯಿಂದ ಸರಣಿಗೆ ಅನೇಕ ದಾಖಲೆಗಳನ್ನು ಮುರಿಯುತ್ತಾ ಬಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಂತರ ಅಶ್ವಿನ್ ಅವರು ಮುತ್ತಯ್ಯ ಮುರಳೀಧರನ್ ಅವರ ದಾಖಲೆಯೊಂದನ್ನು ಮುರಿದರು.
30 ವರ್ಷ ವಯಸ್ಸಿನ ಅಶ್ವಿನ್ ಅವರು ತ್ವರಿತಗತಿಯಲ್ಲಿ 25ನೇ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ವಿಕೆಟ್ ಪಡೆದ ಸಾಧನೆ ಮಾಡಿದರು. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು 100 ಪಂದ್ಯಗಳಲ್ಲಿ ಮಾಡಿದ ಸಾಧನೆಯನ್ನು ಅಶ್ವಿನ್ ಅವರು 88 ಇನ್ನಿಂಗ್ಸ್ ನಲ್ಲೇ ಸಾಧಿಸಿದ್ದಾರೆ. ನ್ಯೂಜಿಲೆಂಡ್ ನ ವೆಗಿ ರಿಚರ್ಡ್ ಹ್ಯಾಡ್ಲಿ ಅವರು 111 ಇನ್ನಿಂಗ್ಸ್ ನಲ್ಲಿ ಈ ಗುರಿ ಮುಟ್ಟಿದ್ದರು.

ಹೆಚ್ಚು ಬಾರಿ 5 ವಿಕೆಟ್ ಪಡೆದವರ ಪಟ್ಟಿಯಲ್ಲಿ ಟೀಂ ಇಂಡಿಯಾದ ಹಾಲಿ ಕೋಚ್ ಅನಿಲ್ ಕುಂಬ್ಳೆ ಅವರು ಮೊದಲನೇ ಸ್ಥಾನದಲ್ಲಿದ್ದಾರೆ. ಕುಂಬ್ಳೆ ಅವರು 35 ಬಾರಿ ಈ ಸಾಧನೆ ಮಾಡಿದ್ದಾರೆ.
ಒಟ್ಟಾರೆ, 269 ವಿಕೆಟ್ ಗಳಿಸಿರುವ ಅಶ್ವಿನ್ ಅವರು ಈಗ ಭಾರತದ ಅತ್ಯಧಿಕ ವಿಕೆಟ್ ಗಳಿಕೆ ಬೌಲರ್ ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಬಿಶನ್ ಸಿಂಗ್ ಬೇಡಿ 266 ವಿಕೆಟ್ ಪಡೆದು ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಶ್ವಿನ್ ಅವರು 6/41 ಪಡೆದು ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 75 ರನ್ ಗಳ ಜಯ ತಂದಿತ್ತರು. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ 1-1 ರಲ್ಲಿ ಸಮಗೊಂಡಿದೆ.