R.Ashwin: ಟೀಮ್ ಇಂಡಿಯಾದ ಮಾಜಿ ಸ್ಪಿನ್ ದಿಗ್ಗಜ ಆರ್.ಅಶ್ವಿನ್ ಅವರು ಸಂದರ್ಶನವೊಂದರಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಅವರು ಅಪರೂಪಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಜೊತೆಗಿನ ಬಾಂಧವ್ಯದ ಕುರಿತು ಪ್ರತಿಕ್ರಿಯಿಸಿ ಗಮನ ಸೆಳೆದಿದ್ದಾರೆ.
ಗೌತಮ್ ಗಂಭೀರ್ ಅವರು ವೈಯಕ್ತಿಕ ಸಾಧನೆಗಳಿಗಿಂತ ತಂಡದ ಯಶಸ್ಸಿಗೆ ಹೆಚ್ಚು ಒತ್ತು ನೀಡುತ್ತಾರೆ. ಯಾರೇ ಆಟಗಾರರಿಗಿಂತ ತಂಡವೇ ದೊಡ್ಡದು ಎಂಬ ಅವರ ಮನಸ್ಥಿತಿಯನ್ನು ಅಶ್ವಿನ್ ಶ್ಲಾಘಿಸಿದ್ದಾರೆ. "ಗೌತಮ್ ಗಂಭೀರ್ ಅವರು ಯಾವಾಗಲೂ ವೈಯಕ್ತಿಕ ವಿಚಾರಗಳನ್ನು ಹೊರಗಿಟ್ಟು, ತಂಡದ ಕಡೆ ಹೆಚ್ಚು ಗಮನಹರಿಸುತ್ತಾರೆ. ನಾನು ಅವರ ಈ ಗುಣವನ್ನು ಮೆಚ್ಚುತ್ತೇನೆ," ಎಂದು ಆರ್.ಅಶ್ವಿನ್ ಹೇಳಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಪರ್ತ್ ಟೆಸ್ಟ್ ವೇಳೆ ತಮಗೆ ಸಮಯ ಮುಗಿಯಿತು ಎಂದು ಅರಿವಾಯಿತು ಅಂತಾ ಅಶ್ವಿನ್ ಹೇಳಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ತಮ್ಮ ನಿವೃತ್ತಿಯ ಬಗ್ಗೆ ಕೇಳಿಬಂದ ಟೀಕೆಗಳನ್ನು ಅಲ್ಲಗಳೆದ ಅವರು, ಅದು ತಮ್ಮದೇ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಸುದೀರ್ಘ ಕಾಲ ಕ್ರಿಕೆಟ್ ಆಡಿದ ನೆನಪುಗಳನ್ನು ಹಂಚಿಕೊಂಡ ಅಶ್ವಿನ್, "ನಮ್ಮ ನಡುವೆ ಎಂದಿಗೂ ಪರಸ್ಪರ ದೂಷಿಸುವ ಗುಣವಿರಲಿಲ್ಲ. ಭಾರತವನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿಯಾಗಿತ್ತು," ಎಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ. ಯಾಕಂದ್ರೆ ಯಾವಾಗಲೂ ವಿರಾಟ್ ಕೊಹ್ಲಿ ಬಗ್ಗೆ ಕೇಳಿದಾಗಲೆಲ್ಲ ಅವರ ವಿರುದ್ಧ ಕೆಂಡಕಾರುತ್ತಲೇ ಬಂದಿದ್ದರು. ಇದೀಗ ಅವರ ಬಾಂಧವ್ಯದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಗಮನ ಸೆಳೆದಿದ್ದಾರೆ.
ಟೀಮ್ ಇಂಡಿಯಾ ಈಗ ಬದಲಾವಣೆಯ ಹಂತದಲ್ಲಿದೆ. ತಂಡದಲ್ಲಿ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ಬೌಲಿಂಗ್ ವಿಭಾಗವು ಈಗ ಹೆಚ್ಚು ಗಮನ ಹರಿಸಬೇಕಾದ ಮತ್ತು ಆತಂಕಕಾರಿ ವಿಷಯವಾಗಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಸ್ಪಿನ್ ಎದುರಿಸುವುದು ಸಮಸ್ಯೆಯಾದರೂ, ಗುಣಮಟ್ಟದ ಬೌಲಿಂಗ್ ಕಾಯ್ದುಕೊಳ್ಳುವುದು ದೊಡ್ಡ ಸವಾಲು ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಅವರು ಭಾರತೀಯ ಕ್ರಿಕೆಟ್ ಒಬ್ಬರು ಅಥವಾ ಇಬ್ಬರು ಸ್ಟಾರ್ ಆಟಗಾರರ ಮೇಲೆ ಅವಲಂಬಿತವಾಗಿಲ್ಲ, ಅದು ಒಟ್ಟಾರೆ ತಂಡದ ಪ್ರಯತ್ನ ಎಂದು ಒತ್ತಿ ಹೇಳಿದ್ದಾರೆ.