
ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಹಾರ್ದಿಕ್ ಪಾಂಡ್ಯ ವಿಚಾರವಾಗಿ ಭಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಭಾರತ ಪ್ರವೇಶ ಪಡೆದುಕೊಂಡಿರುವ ಹಿನ್ನೆಡೆಯಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ಮಾಡಿ ಟೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಆಡಬೇಕು ಎಂಬ ಕೂಗು ಹೆಚ್ಚಾಗಿ ಕೇಳಿ ಬರಲು ಆರಂಭಿಸಿತ್ತು. ಈ ವಿಚಾರವಾಗಿ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸುತ್ತಾ ನಾನು ಇನ್ನೂ ಟೆಸ್ಟ್ ಮಾದರಿಗೆ ಮರಳಲು ಸಿದ್ಧವಾಗಿಲ್ಲ ಎಂದಿದ್ದರು. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡುವ ವಿಚಾರವಾಗಿ ತಮ್ಮ ಮಹತ್ವದ ನಿಲುವು ಹಂಚಿಕೊಂಡಿದ್ದರು.
ಹಾರ್ದಿಕ್ ಪಾಂಡ್ಯ ಅವರ ಈ ನಿಲುವು ಆರ್ ಅಶ್ವಿನ್ ಅವರ ಹೃದಯ ಗೆದ್ದಿದೆ. ಹಾರ್ದಿಕ್ ಪಾಂಡಯ ಅವರ ಹೇಳಿಕೆಯನ್ನು ಉಲ್ಲೇಖಿಸಿ ಆರ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದು ಹಾರ್ದಿಕ್ ಪಾಂಡ್ಯ ಅವರಂತಾ ಆಟಗಾರನಿಂದ ಬಂದ ಅತ್ಯಂತ ದೊಡ್ಡ ಹೇಳಿಕೆಯಿದು ಎಂದಿದ್ದಾರೆ ಆರ್ ಅಶ್ವಿನ್.
ವಿಶ್ವ ಟೆಸ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಹಾರ್ದಿಕ್ ಪಾಂಡ್ಯ ತಾನು ಆ ಹಂತದಲ್ಲಿ ಆಡಲು ಅರ್ಹತೆಯನ್ನು ಸಂಪಾದಿಸಿಲ್ಲ ಎಂದಿದ್ದರು. "ನಾನು ನೈತಿಕವಾಗಿ ಬಲಿಷ್ಠ ವ್ಯಕ್ತಿ. ನಾನು ಅಲ್ಲಿ ಆಡಲು 10 ಶೇಕಡಾದಷ್ಟು ಕೂಡ ಅರ್ಹತೆ ಪಡೆದಿಲ್ಲ. ನಾನು 1ಶೇಕಡಾದಷ್ಟು ಕೂಡ ಟೆಸ್ಟ್ ತಂಡದ ಭಾಗವಾಗಿಲ್ಲ. ಈಗ ನಾನು ಅಲ್ಲಿಗೆ ಬಂದು ಮತ್ತೋರ್ವ ಆಟಗಾರನ ಸ್ಥಾನವನ್ನು ಕಸಿದುಕೊಳ್ಳುವುದು ನನಗೆ ಸರಿಯೆನಿಸುವುದಿಲ್ಲ" ಎಂದಿದ್ದರು ಹಾರ್ದಿಕ್ ಪಾಂಡ್ಯ.
"ನಾನು ಟೆಸ್ಟ್ ಕ್ರಿಕೆಟ್ ಆಡಲು ಬಯಸಿದರೆ, ನಾನು ಆರಂಭದಿಂದಲೇ ಆಡಿ ನನ್ನ ಸ್ಥಾನವನ್ನು ಗಳಿಸುತ್ತೇನೆ. ಹಾಗಾಗಿ ನಾನು ನನ್ನ ಸ್ಥಾನವನ್ನು ಗಳಿಸಿದ್ದೇನೆ ಎಂದು ಭಾವನೆ ಮೂಡುವವರೆಗೂ ನಾನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಅಥವಾ ಭವಿಷ್ಯದ ಟೆಸ್ಟ್ ಸರಣಿಗೆ ಲಭ್ಯವಿರುವುದಿಲ್ಲ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
ಹಾರ್ದಿಕ್ ಪಾಂಡ್ಯ ಅವರ ಈ ನಿಲುವಿನ ಬಗ್ಗೆ ಮಾತನಾಡಿರುವ ಆರ್ ಅಶ್ವಿನ್ ಇದು ಹಾರ್ದಿಕ್ ಪಾಂಡ್ಯ ಅವರಂತಾ ಆಟಗಾರನಿಂದ ಬಂದಿರುವ ಅತ್ಯಂತ ದೊಡ್ಡ ಹೇಳಿಕೆ ಎಂದು ಉಲ್ಲೇಖಿಸಿದ್ದಾರೆ. "ನಮ್ಮ ವೈಫಲ್ಯಗಳಿಗೆ ಬೇರೊಬ್ಬರನ್ನು ದೂಷಿಸುವ ಅಭ್ಯಾಸವನ್ನು ನಾವು ಹೊಂದಿದ್ದೇವೆ. ನಾವು ಅಸಮಾಧಾನಗೊಂಡಾಗ ಅದಕ್ಕೆ ಕಾರಣಗಳನ್ನು ಹುಡುಕಲು ಆರಂಬಿಸುತ್ತೇವೆ. ಆದರೆ ಹಾರ್ದಿಕ್ ಪಾಂಡ್ಯ ಇಂಥಾ ಸಂದರ್ಭದಲ್ಲಿ ತಾನು ಟೆಸ್ಟ್ ಆಡಲು ಅರ್ಹನಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇದು ಅವರಂತಾ ಆಟಗಾರನಿಂದ ಬಂದಿರುವ ದೊಡ್ಡ ಹೇಳಿಕೆ" ಎಂದಿದ್ದಾರೆ ಆರ್ ಅಶ್ವಿನ್.
ಇನ್ನು ಇದೇ ಸಂದರ್ಭದಲ್ಲಿ ಆರ್ ಅಶ್ವಿನ್ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆಯೂ ಮಾತನಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಬಳಸಿಕೊಂಡ ರೀತಿಗೆ ಆರ್ ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.