ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಮಧ್ಯಮ ಕ್ರಮಾಂಕದ ಆಟಗಾರ ರಚಿನ್ ರವೀಂದ್ರ ಇತಿಹಾಸ ನಿರ್ಮಿಸಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕಿವೀಸ್ ಪ್ಲೇಯರ್ ಆರ್ಭಟ ನಡೆಸಿದರು. ತವರು ಅಂಗಳದಲ್ಲಿ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರು ಸದ್ಯ ನ್ಯೂಜಿಲೆಂಡ್‌ನಲ್ಲಿ ವಾಸವಾಗಿದ್ದಾರೆ. ಇವರ ತಂದೆ ಕೆಲಸದ ನಿಮಿತ್ಯ ನ್ಯೂಜಿಲೆಂಡ್‌ಗೆ ಹೋಗಿದ್ದರು. ಅಲ್ಲಿಯೇ ಈಗ ವಾಸ್ತವ್ಯ ಹೂಡಿದ್ದಾರೆ. ಮಗ ರಚಿನ್ ರವೀಂದ್ರ ಅವರ ಕ್ರಿಕೆಟ್ ಮೇಲಿನ ಪ್ರೀತಿಯ ಕಂಡು ಪಾಲಕರು ಅವನನ್ನು ಕ್ರಿಕೆಟ್ ಕ್ಲಬ್‌ಗೆ ಸೇರಿಸಿದರು.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದ್ದಾರೆ. ಕೇವಲ 124 ಎಸೆತಗಳಲ್ಲಿ ಅವರು ಈ ಸಾಧನೆ ಮಾಡಿದರು. ಈ ಅವಧಿಯಲ್ಲಿ, ಅವರ ಇನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸೇರಿವೆ. ಚಿನ್ನಸ್ವಾಮಿ ಅಂಗಳದಲ್ಲಿ ಭಾರತದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿತ್ತು. ರಚಿನ್ ರವೀಂದ್ರ ತಾವು ಆಡಿದ ಬೆಳೆದ ಊರಿನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ 24 ವರ್ಷದ ಯುವ ಆಟಗಾರನ ಎರಡನೇ ಶತಕವಾಗಿದೆ.
ರಚಿನ್ ರವೀಂದ್ರ ಬೆಂಗಳೂರಿನಲ್ಲಿ ಶತಕ ಬಾರಿಸುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. 12 ವರ್ಷಗಳ ನಂತರ ಭಾರತದಲ್ಲಿ ಮೂರಂಕಿ ಮುಟ್ಟಿದ ನ್ಯೂಜಿಲೆಂಡ್‌ನ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ 2012 ರಲ್ಲಿ ನ್ಯೂಜಿಲೆಂಡ್ ಪರ ಕೊನೆಯ ಶತಕವನ್ನು ರಾಸ್ ಟೇಲರ್ ಬಾರಿಸಿದ್ದರು. ಇದರಲ್ಲಿ ವಿಶೇಷತೆ ಅಂದರೆ ರಾಸ್ ಟೇಲರ್ ಸಹ ಇದೇ ಅಂಗಳದಲ್ಲಿ ಶತಕ ಬಾರಿಸಿದ್ದರು.
ಕಳೆದ ವರ್ಷ ಭಾರತದಲ್ಲಿ ನಡೆದ ಪುರುಷರ ಏಕದಿನ ವಿಶ್ವಕಪ್‌ನಲ್ಲಿ ರಚಿನ್ ರವೀಂದ್ರ ಅಮೋಘ ಶತಕ ಬಾರಿಸಿ ಅಬ್ಬರಿಸಿದ್ದರು. ಕಳೆದ ವರ್ಷ ನವೆಂಬರ್ 4 ರಂದು ಪಾಕಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ರಚಿನ್ ಶತಕ ಬಾರಿಸಿದ್ದರು. ಇದರಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 108 ರನ್ ಸಿಡಿಸಿದ್ದರು. ರಚಿನ್ ರವೀಂದ್ರ ಹುಟ್ಟಿ ಬೆಳೆದಿದ್ದು ನ್ಯೂಜಿಲೆಂಡ್ನಲ್ಲಾದರೂ ರಾಜ್ಯ ರಾಜಧಾನಿಯೊಂದಿಗೆ ಇವರು ವಿಶೇಷ ಸಂಬಂಧವನ್ನು ಹೊಂದಿದ್ದಾರೆ.
ರಚಿನ್ ರವೀಂದ್ರ ಅವರ ಅಮೋಘ ಶತಕದ ನೆರವಿನಿಂದ, ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 402 ರನ್ ಸೇರಿಸಿತು. 8ನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಅನುಭವಿ ಟೀಮ್ ಸೌಥಿ ಕ್ಲಾಸಿಕ್ ಜೊತೆಯಾಟ ನೀಡಿದರು. ಈ ಜೋಡಿ 132 ಎಸೆತಗಳಲ್ಲಿ 137 ರನ್ ಗಳ ಜೊತೆಯಾಟ ನೀಡಿತು. ಟೀಮ್ ಸೌಥಿ ತಮ್ಮಲ್ಲಿರುವ ಬ್ಯಾಟಿಂಗ್ ಕಲೆಯನ್ನು ಹೊರ ಹಾಕಿದರು. ಇವರು 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 65 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.