ರಚಿನ್ ರವೀಂದ್ರ ಹೆಸರು ಕೇಳಿದ್ರೆ ಸಾಕು, ಕ್ರಿಕೆಟ್ ಅಭಿಮಾನಿಗಳಲ್ಲಿ ನಮ್ಮವರು ಎಂಬ ಭಾವ. ತಮ್ಮ 25ನೇ ವಯಸ್ಸಿನಲ್ಲಿ ಐಸಿಸಿ ಟೂರ್ನಿಗಳಲ್ಲಿ ಮಿಂಚು ಹರಿಸುತ್ತಿರುವ ಪ್ಲೇಯರ್ ನ್ಯೂಜಿಲೆಂಡ್ ತಂಡದ ಭವಿಷ್ಯದ ತಾರೆ ಎಂದು ಸಾಬೀತು ಪಡಿಸಿದ್ದಾರೆ. ತಮ್ಮ ಧಮಾಕೆದಾರ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗುವ ಪ್ಲೇಯರ್, ತಂಡ ಸಂಕಷ್ಟದಲ್ಲಿದ್ದಾಗ ಎದೆಗೊಟ್ಟು ನಿಲ್ಲುತ್ತಾರೆ. ಯಾವುದೇ ಒತ್ತಡದ ಸನ್ನಿವೇಶವೇ ಇರಲಿ ರಚಿನ್ ರವೀಂದ್ರ ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ನಿಸ್ಸೀಮರು.
ತಮ್ಮ ಚಿಕ್ಕ ವಯಸ್ಸಿನಲ್ಲಿ ನ್ಯೂಜಿಲೆಂಡ್ ಪರ ಪದಾರ್ಪಣೆ ಮಾಡಿರುವ ರಚಿನ್ ರವೀಂದ್ರ ಭರವಸೆ ಮೂಡಿಸಿರುವ ಆಟಗಾರ. ತಮ್ಮ ಆಲ್‌ರೌಂಡರ್ ಆಟದಿಂದ ತಂಡಕ್ಕೆ ಆಧಾರವಾಗುವ ರಚಿನ್, ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ ಮಹಲ್ ಕಟ್ಟಿದ್ದಾರೆ. ರಚಿನ್ ರವೀಂದ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಶತಕ ಸಿಡಿಸಿ 226 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿರುವ ಬೆನ್ ಡಕೆಟ್ ಹಾಗೂ ರಚಿನ್ ರವೀಂದ್ರ ಅವರಿಗೆ ಕೇವಲ 1 ರನ್ ವ್ಯತ್ಯಾಸವಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ರಚಿನ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ತಾವು ಎದುರಿಸಿದ 101 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ನೆರವಿನಿಂದ 108 ರನ್ ಬಾರಿಸಿ ಮಿಂಚಿದರು. ಈ ಮೂಲಕ ವೃತ್ತಿ ಜೀವನದ 5ನೇ ಶತಕ ಬಾರಿಸಿ ಮಿಂಚಿದರು. ಈ ಐದೂ ಶತಕಗಳು ಐಸಿಸಿ ಟೂರ್ನಿಯಲ್ಲೇ ಬಂದಿರುವುದು ವಿಶೇಷವಾಗಿದೆ. ಇವರು ತಮ್ಮ 25ನೇ ವಯಸ್ಸಿನಲ್ಲಿ ಐಸಿಸಿ ಟೂರ್ನಿಗಳಲ್ಲಿ ಐದು ಶತಕ ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ತಂಡದ ಭವಿಷ್ಯಕ್ಕೆ ಆಧಾರವಾಗುವ ಸೂಚನೆಯನ್ನು ನೀಡಿದ್ದಾರೆ.
ಸ್ಟಾರ್ ಆಟಗಾರರಿಂದ ಕೂಡಿದ್ದ ನ್ಯೂಜಿಲೆಂಡ್ ತಂಡದಲ್ಲಿ ಕೇನ್ ವಿಲಿಯಮ್ಸನ್ ಕ್ಲಾಸ್ ಪ್ಲೇಯರ್. ಇವರ ಹೆಜ್ಜೆ ಗುರುತನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಯನ್ನು ಅಭಿಮಾನಿಗಳ ಮನದಲ್ಲಿತ್ತು. ಚಾಂಪಿಯನ್ಸ್ ಟ್ರೋಫಿ ಹಾಗೂ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಚಿನ್ ರವಿಂದ್ರ ಬ್ಯಾಟಿಂಗ್ ದಿಗ್ಗಜನ ನೆರಳಲ್ಲಿ ಹೆಮ್ಮರವಾಗಿ ಬೆಳೆಯುವ ಸೂಚನೆ ನೀಡಿದ್ದಾರೆ.

ರಚಿನ್ ರವೀಂದ್ರ ಬೆಂಗಳೂರು ಮೂಲದವರು. ಇವರ ತಂದೆ ಕೆಲಸದ ನಿಮಿತ್ಯ ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದ್ದು, ರಚಿನ್ ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿದ್ದಾರೆ. ಅವರ ಜನನ ಸಹ ನ್ಯೂಜಿಲೆಂಡ್‌ನಲ್ಲಿ ಆಗಿದೆ. ಬೆಂಗಳೂರಿನಲ್ಲಿ ಅವರ ತಾತನ ಮನೆ ಇದ್ದು ಬಿಡುವಿದ್ದಾಗ ಇಲ್ಲಿಗೆ ಬರುತ್ತಾರೆ.
ರಚಿನ್ ರವೀಂದ್ರ ಐಪಿಎಲ್‌ನಲ್ಲೂ ಮಿಂಚು ಹರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ರಚಿನ್, 18ನೇ ಆವೃತ್ತಿಯಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.