Raghuram Bhat: ಕೆಲವೇ ಟೆಸ್ಟ್ ಪಂದ್ಯಗಳನ್ನು ಆಡಿದರೂ ಛಾಪು ಮೂಡಿಸಿದ್ದ ಕ್ರಿಕೆಟಿಗ
ಕರ್ನಾಟಕ ಮೂಲದ ಕ್ರಿಕೆಟಿಗರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಸರಣಿ ಲೇಖನದಲ್ಲಿ ರಾಜ್ಯದ ಮತ್ತೋರ್ವ ಸ್ಪಿನ್ ದಿಗ್ಗಜ ಅಡ್ವಾಯಿ ರಘುರಾಮ್ ಭಟ್ ಅವರ ವೃತ್ತಿ ಮತ್ತು ಇದರ ನಂತರದ ಅವರ ಬದುಕಿನ ಬಗ್ಗೆ ಒಂದು ಸಂಕ್ಷಿಪ್ತ ಝಲಕ್. ಏಪ್ರಿಲ್ 16, 1958ರಲ್ಲಿ ಮೈಸೂರಿನಲ್ಲಿ ಜನಿಸಿದ ಭಟ್, ನಿಧಾನವಾದ ಎಡಗೈ ಬೌಲಿಂಗ್ ಶೈಲಿಗೆ ಹೆಸರಾದವರು.
ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ರಘುರಾಮ್ ಭಟ್ ಆಡಿದ್ದರೂ, ದೇಶೀಯ ಕ್ರಿಕೆಟಿನಲ್ಲಿ ಅವರು ತೋರಿದ್ದ ಛಾಪು ನೆನಪಿನಲ್ಲಿ ಉಳಿಯುವಂತದ್ದು. ಎರಡು ಟೆಸ್ಟಿಗೆ ಮಾತ್ರ ಸೀಮಿತವಾಗಿದ್ದ ಅವರ ರಾಷ್ಟ್ರೀಯ ಕ್ರಿಕೆಟಿನ ವೃತ್ತಿ ಬದುಕಿಗೆ ಪ್ರಾಂತ್ಯಾವಾರು ತಾರತಮ್ಯ ಎಂದೂ ಆ ವೇಳೆ ಚಾಲ್ತಿಯಲ್ಲಿತ್ತು. ಎಡಗೈ ಬ್ಯಾಟ್ಸಮ್ಯಾನ್ ಕೂಡಾ ಆಗಿರುವ ಭಟ್, ಬೌಲಿಂಗ್ ನಲ್ಲೇ ಹೆಚ್ಚು ಪ್ರಸಿದ್ದರಾಗಿದ್ದವರು.

1979-80ರಲ್ಲಿ ತಮಿಳುನಾಡು ವಿರುದ್ದ ರಣಜಿ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದ ರಘುರಾಮ್ ಭಟ್ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದರು. ಇದಾದ ನಂತರದ ಪಂದ್ಯಗಳಲ್ಲಿ ಪಿಕ್ಅಪ್ ಆದ್ ಭಟ್, ಕೇರಳದ ವಿರುದ್ದದ ಪಂದ್ಯದಲ್ಲಿ ಒಂಬತ್ತು ವಿಕೆಟ್ ಮತ್ತು ಪಂಜಾಬ್ ವಿರುದ್ದದ ರಣಜಿ ಪಂದ್ಯದಲ್ಲಿ ಆರು ವಿಕೆಟ್ ಪಡೆದು ಕರ್ನಾಟಕ ರಣಜಿ ತಂಡದಲ್ಲಿ ಭದ್ರ ಸ್ಥಾನವನ್ನು ಪಡೆದಿದ್ದರು.
1981-82ರಲ್ಲಿ ಮುಂಬೈ ಮತ್ತು ಕರ್ನಾಟಕದ ನಡುವಿನ ಪಂದ್ಯದಲ್ಲಿ ರಾಜ್ಯ ಗೆದ್ದು ಫೈನಲ್ ಏರುವಲ್ಲಿ ಭಟ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಆ ಪಂದ್ಯದಲ್ಲಿ ಮಾಜಿ ಕ್ಯಾಪ್ಟನ್ ಸುನೀಲ್ ಗವಾಸ್ಕರ್ ಅವರು ರಘುರಾಮ್ ಭಟ್ ವಿರುದ್ದ ಎಡಗೈ ಬ್ಯಾಟಿಂಗ್ ಮಾಡಿದ್ದರು. ಅಂದಿನ ಘಟನೆಯನ್ನು ಭಟ್ ಈ ರೀತಿ ವಿವರಿಸಿದ್ದರು, "ಮುಂಬೈ ಮತ್ತು ಕರ್ನಾಟಕ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್‌ನ ಅಂತಿಮ ದಿನ, ನಾನು ಆ ಪಂದ್ಯದಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದೆ".
ನನ್ನ ಎಡಗೈ ಸ್ಪಿನ್‌ನಿಂದ ಮುಂಬೈಗೆ ಶಾಕ್
"ನನ್ನ ಎಡಗೈ ಸ್ಪಿನ್‌ನಿಂದ ಮುಂಬೈಗೆ ಶಾಕ್ ನೀಡಿದ್ದೆ, 2ನೇ ಇನಿಂಗ್ಸ್ ನಲ್ಲಿ ಮುಂಬೈ ಮತ್ತೆ ತತ್ತರಿಸಿ ಇನ್ನಿಂಗ್ಸ್ ಸೋಲಿನ ಅಂಚಿನಲ್ಲಿತ್ತು. ಗವಾಸ್ಕರ್ 7ನೇ ಕ್ರಮಾಂಕದಲ್ಲಿ ಆಡಲು ಬಂದರು. ಬಲಗೈನಿಂದ ನನ್ನ ಸ್ಪಿನ್ ಆಡಲು ನಿರಾಕರಿಸಿ ಗವಾಸ್ಕರ್, ಎಡಗೈ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಸುಮಾರು ಒಂದು ಗಂಟೆ ನನ್ನ ಬೌಲಿಂಗ್ ಅವರು ಎದುರಿಸಿದರು ಮತ್ತು ಔಟಾಗದೆ 18 ರನ್ ಗಳಿಸಿದರು. ಆ ಪಂದ್ಯ ಡ್ರಾ ಆಯಿತು, ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ನಾವು ಫೈನಲ್ ಪ್ರವೇಶಿಸಿದೆವು" ಎಂದು ರಘುರಾಮ್ ಭಟ್ ಅಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ನಾಗ್ಪುರದ ವಿದರ್ಭ ಕ್ರೀಡಾಂಗಣ
ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಜೊತೆ ಮತ್ತು ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ರಘುರಾಮ್ ಭಟ್ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಪಾಕ್ ಜೊತೆಗಿನ ಪಂದ್ಯದಲ್ಲಿ ಜಾವೇದ್ ಮಿಯಾಂದಾದ್, ಮುದಸ್ಸರ್ ಜನರ್ ಮತ್ತು ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ ಮತ್ತು ಗಸ್ ಲೋಗಿ ವಿಕೆಟ್ ಅನ್ನು ಭಟ್ ಪಡೆದಿದ್ದರು. ಪಾಕ್ ವಿರುದ್ದದ ಪಂದ್ಯ ಡ್ರಾ ಮತ್ತು ಕೆರೆಬಿಯನ್ ವಿರುದ್ದದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸೋಲು ಅನುಭವಿಸಿತ್ತು. ಅಲ್ಲಿಂದ, ಭಟ್ ಅವರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶವೂ ತಪ್ಪಿತು.
ಆಡಿದ ಎರಡು ಟೆಸ್ಟ್ ಪಂದ್ಯಗಳಿಂದ ನಾಲ್ಕು ವಿಕೆಟ್
ಆಡಿದ ಎರಡು ಟೆಸ್ಟ್ ಪಂದ್ಯಗಳಿಂದ ನಾಲ್ಕು ವಿಕೆಟ್, 82 ಪ್ರಥಮ ದರ್ಜೆ ಪಂದ್ಯದಿಂದ 374 ವಿಕೆಟ್ ಅನ್ನು ರಘುರಾಮ್ ಭಟ್ ಪಡೆದಿದ್ದಾರೆ. 1992-93ರಲ್ಲಿ ಮಧ್ಯ ಪ್ರದೇಶದ ಜೊತೆಗಿನ ಪ್ರಿಕ್ವಾರ್ಟರ್ ಫೈನಲ್ ಪಂದ್ಯದ ಮೂಲಕ ರಘುರಾಮ್ ಭಟ್ ನಿವೃತ್ತಿಯನ್ನು ಹೊಂದಿದರು. ಮೊದಲನೇ ಲಾಕ್ಡೌನ್ ವೇಳೆ ಹಲವು ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಯನ್ನು ವಿತರಿಸಿ ರಘುರಾಮ್ ಭಟ್ ಮಾನವೀಯತೆಯನ್ನು ಮೆರೆದಿದ್ದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ರಘುರಾಮ್ ಭಟ್, ನಿವೃತ್ತರಾದ ಬಳಿಕ ಅಂಪೈರ್, ಕೋಚ್ ಹಾಗೂ ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2011ರ ಜುಲೈನಲ್ಲಿ ಗೋವಾ ಕ್ರಿಕೆಟ್ ತಂಡದ ಕೋಚ್ ಆಗಿ ಭಟ್ ಕಾರ್ಯನಿರ್ವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications