ದ.ಆಫ್ರಿಕಾ ಪ್ರವಾಸ: ಟೀಮ್ ಇಂಡಿಯಾದಿಂದ ಹೊರಬೀಳಲಿದ್ದಾರೆ ಈ ಇಬ್ಬರು ಸ್ಟಾರ್ ಆಟಗಾರರು!

ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಮತ್ತು ಟೆಸ್ಟ್ ಎರಡೂ ಸರಣಿಗಳಲ್ಲಿಯೂ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ್ದರ ಪ್ರತೀಕಾರವನ್ನು ತೀರಿಸಿಕೊಂಡಿದೆ.
ಹೌದು, ಇತ್ತೀಚೆಗಷ್ಟೇ ಯುಎಇಯಲ್ಲಿ ಮುಕ್ತಾಯವಾದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ನ್ಯೂಜಿಲೆಂಡ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಪ್ರವಾಸವನ್ನು ಕೈಗೊಂಡು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತ್ತು. ಮೊದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ನ್ಯೂಜಿಲೆಂಡ್ ತಂಡಕ್ಕೆ ಮಣ್ಣುಮುಕ್ಕಿಸಿದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ವೈಟ್ ವಾಷ್ ಸಾಧನೆಯನ್ನು ಮಾಡಿತು.
ನಂತರ ಇತ್ತಂಡಗಳ ನಡುವೆ ಕಾನ್ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಸೋಲುವ ಹಂತದಲ್ಲಿದ್ದ ನ್ಯೂಜಿಲೆಂಡ್ ಅಂತಿಮ ಹಂತದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಆದರೆ ಇತ್ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಖಲೆಯ 372 ರನ್‌ಗಳ ಜಯವನ್ನು ಸಾಧಿಸುವುದರ ಮೂಲಕ ಟೆಸ್ಟ್ ಸರಣಿಯನ್ನು ವಶಕ್ಕೆ ಪಡೆದುಕೊಂಡಿತು.
ಹೀಗೆ ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲು ತಯಾರಿದ್ದು 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಯಾವ ಯಾವ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದರ ಕುರಿತು ಕುತೂಹಲಗಳು ಹೆಚ್ಚಾಗಿದ್ದು, ಇತ್ತೀಚೆಗೆ ನಡೆದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಈ ಕೆಳಕಂಡ ಇಬ್ಬರು ಆಟಗಾರರು ತಂಡದಿಂದ ಸ್ಥಾನ ಕಳೆದುಕೊಂಡು ಹೊರಬೀಳಲಿದ್ದಾರೆ ಎನ್ನಲಾಗುತ್ತಿದೆ.

ಅಜಿಂಕ್ಯ ರಹಾನೆ ಸ್ಥಾನದ ಕುರಿತು ಚರ್ಚೆ ನಡೆಯಲಿದೆ ಎಂದ ಬಿಸಿಸಿಐ ಅಧಿಕಾರಿ
ಬಿಸಿಸಿಐನ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿರುವ ತಂಡದ ಕುರಿತು ನಾಯಕ ವಿರಾಟ್ ಕೊಹ್ಲಿ ಹಾಗೂ ತರಬೇತುದಾರ ರಾಹುಲ್ ದ್ರಾವಿಡ್ ಆಯ್ಕೆಗಾರರ ಜತೆ ಇಂದು ( ಡಿಸೆಂಬರ್ 7 ) ಮಧ್ಯಾಹ್ನ ಸಭೆ ನಡೆಸಲಿದ್ದು, ಅಜಿಂಕ್ಯ ರಹಾನೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ತಂಡದಿಂದ ಹೊರಗಿಡಬೇಕೇ ಎಂಬುದರ ಕುರಿತು ಖಂಡಿತವಾಗಿಯೂ ಚರ್ಚೆ ನಡೆಯಲಿದೆ ಎಂದಿದ್ದರು.

ಇಶಾಂತ್ ಶರ್ಮಾ ಕೂಡ ಅನುಮಾನ
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿರುವ ಟೀಮ್ ಇಂಡಿಯಾ ಕುರಿತು ಇನ್ನೂ ಮುಂದುವರಿದು ಮಾತನಾಡಿರುವ ಬಿಸಿಸಿಐನ ಅಧಿಕಾರಿಯೋರ್ವರು ಇಶಾಂತ್ ಶರ್ಮಾ ಕುರಿತಾಗಿಯೂ ಸಹ ಸಭೆಯಲ್ಲಿ ಚರ್ಚೆಗಳು ನಡೆಯಲಿದೆ ಎಂದಿದ್ದಾರೆ. ಹೀಗಾಗಿ ಸಾಲುಸಾಲು ಕಳಪೆ ಪ್ರದರ್ಶನ ನೀಡಿರುವ ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳ ವೇಳಾಪಟ್ಟಿ ಹೀಗಿದೆ
ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು ಇದರ ವೇಳಾ ಪಟ್ಟಿ ಈ ಕೆಳಕಂಡಂತಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಹೀಗೆ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಅದರ ವೇಳಾಪಟ್ಟಿ ಹೀಗಿದೆ
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications