ಜುಲೈ 16 ಮಂಗಳವಾರ, ಕಳೆದ ತಿಂಗಳು ವೆಸ್ಟ್‌ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಗೆಲುವಿನ ಕಾರಣರಾದ ಭಾರತ ತಂಡದ ನಿರ್ಗಮಿತ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಧಾನ ಪರಿಷತ್ತಿನಲ್ಲಿ ಅಭಿನಂದಾನ ಗೌರವ ಸಲ್ಲಿಸಲಾಗಿದೆ.
ಈ ಬಾರಿ ಟಿ-20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಅಭಿನಂದಿಸಬೇಕೆಂದು ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದರು.

ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಇಲ್ಲಿಯವರೆಗೆ ಭಾರತ 4 ವಿಶ್ವಕಪ್ ಗೆದ್ದಿದೆ. ಮೊದಲ ವಿಶ್ವಕಪ್ 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಗೆದ್ದರು. ನಂತರ 2007ರಲ್ಲಿ ಟಿ20 ಹಾಗೂ 2011ರಲ್ಲಿ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದರು.
ಇದೀಗ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮತ್ತೊಮ್ಮೆ ಟಿ20 ವಿಶ್ವಕಪ್ ಮಡಿಗೇರಿಸಿಕೊಂಡಿದೆ. ತಂಡಕ್ಕೆ ಕಪ್ ಗೆಲ್ಲಲು ರಾಹುಲ್ ದ್ರಾವಿಡ್ ಪ್ರೇರಣೆ ಎಂದು ಪರಿಷತ್ ಸದಸ್ಯ ಅರುಣ್ ಹೊಗಳಿ ಅಭಿನಂದಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡಿದ ಪ್ರಕಾಶ್ ರಾಥೋಡ್, ದ್ರಾವಿಡ್ ಅವರನ್ನು ಅಭಿನಂದಿಸುವ ಪ್ರಸ್ತಾಪವನ್ನು ಒಪ್ಪಿಕೊಂಡರು. ನಾನು ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ)ಗಾಗಿ ಆಡಿದಾಗ, ರಾಹುಲ್ ನನ್ನ ತಂಡದಲ್ಲಿದ್ದರು.
ರಣಜಿ ಆಡುವ ಮುನ್ನ ದ್ರಾವಿಡ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರನ್ನು ಲಂಡನ್‌ಗೆ ಕರೆದುಕೊಂಡು ಹೋಗಿ ಆಡಿದೆವು. ನಂತರ ಅವರು ಬೌಲರ್ ಮತ್ತು ಕೀಪರ್ ಆಗಿದ್ದರು. ಹೆಚ್ಚು ಬ್ಯಾಟಿಂಗ್ ಮಾಡುತ್ತಿರಲಿಲ್ಲ.
ಆದರೆ ನಂತರ ದ್ರಾವಿಡ್ ಉತ್ತಮ ಬ್ಯಾಟರ್ ಆಗಿ ಮತ್ತು ಈಗ ಕೋಚ್ ಆಗಿ ಭಾರತಕ್ಕೆ ಕೊಡುಗೆ ನೀಡಿದ್ದಾರೆ. ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರನ್ನು ಅಭಿನಂದಿಸುವುದರ ಜೊತೆಗೆ ದ್ರಾವಿಡ್ ಅವರಿಗೆ ವಿಶೇಷ ಗೌರವ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಇದಾದ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೊರ ಬಂದು ಈ ಪ್ರಸ್ತಾವನೆಗೆ ಸದನ ಒಪ್ಪಿಗೆ ನೀಡುವುದಾಗಿ ಘೋಷಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ಕಪ್ ಗೆಲ್ಲಲು ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಮುಖ್ಯವಾಗಿದೆ. ಅವರು ನಮ್ಮ ರಾಜ್ಯದ ಅಳಿಯ ಕೂಡ ಆಗಿದ್ದು, ಅವರನ್ನು ಅಭಿನಂದಿಸಲೇಬೇಕು ಎಂದರು. ಇದಕ್ಕೆ ಒಪ್ಪಿದ ಸ್ಪೀಕರ್ ಅವರ ಹೆಸರನ್ನೂ ಸೇರಿಸಲಾಗಿದೆ ಎಂದು ಘೋಷಿಸಿದರು.