ಸಹಾಯಕ ಕೋಚಿಂಗ್ ಸಿಬ್ಬಂದಿಗಿಂತ ಹೆಚ್ಚುವರಿ 2.5 ಕೋಟಿ ಬಹುಮಾನ ನಿರಾಕರಿಸಿದ ರಾಹುಲ್ ದ್ರಾವಿಡ್
ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್, ರಿಯಲ್ 'ಜಂಟಲ್‌ಮ್ಯಾನ್' ರಾಹುಲ್ ದ್ರಾವಿಡ್ ಅವರು ತಮ್ಮ ಪಾತ್ರ ಮತ್ತು ವ್ಯಕ್ತಿತ್ವಕ್ಕೆ ತಕ್ಕಂತೆ ಮತ್ತೊಂದು ಉತ್ತಮ ಉದಾಹರಣೆಯಾಗಿದ್ದಾರೆ.
ತಮ್ಮ ಸಹಾಯಕ ಸಿಬ್ಬಂದಿಗೆ ಸಿಗುವ ಬಹುಮಾನ ಮೊತ್ತವನ್ನೇ ತಾವು ಪಡೆಯಲು ನಿರ್ಧರಿಸುವ ಮೂಲಕ ರಾಹುಲ್ ದ್ರಾವಿಡ್ ಸಮಾನತೆ ಮೆರೆದಿದ್ದಾರೆ. ಹಣಕ್ಕಾಗಿ ಆಸೆ ಪಡದೆ, ತನ್ನ ತನ್ನ ಜೊತೆಗಿರುವವರೊಂದಿಗೆ ನಿಲ್ಲುವ ಮೂಲಕ ಮಾದರಿಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಘೋಷಿಸಿದ 125 ಕೋಟಿ ರೂಪಾಯಿ ಬಹುಮಾನ ಮೊತ್ತದ ಪೂಲ್‌ನಿಂದ, ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ತಾವು ಪಡೆಯಬೇಕಿದ್ದ 5 ಕೋಟಿ ಬಹುಮಾನದಲ್ಲಿ ಅರ್ಧದಷ್ಟು ಹಣವನ್ನು ಕೈಬಿಡಲು ನಿರ್ಧರಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿಹಿಡಿಯಿತು. ಆ ಬಳಿಕ ತಂಡದ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗೆ ನಗದು ಬಹುಮಾನವಾಗಿ ಒಟ್ಟು 125 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಬಿಸಿಸಿಐ ಘೋಷಿಸಿತು.
ಭಾರತ ತಂಡದ ಪ್ರಮುಖ 15 ಆಟಗಾರರಿಗೆ ಹಂಚಿದಂತೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ 5 ಕೋಟಿ ರೂಪಾಯಿ ಹಂಚಲಾಗಿದೆ. ಆದರೆ, ಭಾರತ ತಂಡದ ಇತರ ಕೋಚಿಂಗ್ ಸಿಬ್ಬಂದಿಗೆ 2.5 ಕೋಟಿ ರೂಪಾಯಿ ನೀಡಲಾಯಿತು.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳಿಗೆ ಹೋಲಿಸಿದರೆ, ಹೆಚ್ಚುವರಿ ಮೊತ್ತವನ್ನು ಪಡೆಯಲು ಬಯಸುವುದಿಲ್ಲವಾದ್ದರಿಂದ ತಮ್ಮ ನಗದು ಬಹುಮಾನವನ್ನು 2.5 ಕೋಟಿ ರೂಪಾಯಿಗೆ ತಗ್ಗಿಸುವಂತೆ ಬಿಸಿಸಿಐಗೆ ಮನವಿ ಮಾಡಿದರು.
"ರಾಹುಲ್ ದ್ರಾವಿಡ್ ಅವರು ಉಳಿದ ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್‌ರಂತೆ ಅದೇ ಬಹುಮಾನ ಮೊತ್ತವನ್ನು (2.5 ಕೋಟಿ ರೂಪಾಯಿ) ಬಯಸಿದ್ದಾರೆ. ನಾವು ಅವರ ಭಾವನೆಗಳನ್ನು ಗೌರವಿಸುತ್ತೇವೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
"2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದ ಟೀಮ್ ಇಂಡಿಯಾಕ್ಕೆ 125 ಕೋಟಿ ರೂಪಾಯಿಗಳ ಬಹುಮಾನದ ಮೊತ್ತವನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಪಂದ್ಯಾವಳಿಯುದ್ದಕ್ಕೂ ತಂಡವು ಅಸಾಧಾರಣ ಪ್ರತಿಭೆ, ನಿರ್ಧಾರ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು," ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದರು.
ಗಮನಾರ್ಹ ಅಂಶವೆಂದರೆ, ರಾಹುಲ್ ದ್ರಾವಿಡ್ ಅವರು 2018ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಮುಖ್ಯ ತರಬೇತುದಾರರಾಗಿ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿದ್ದರು.

ಆ ಸಂದರ್ಭದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂಪಾಯಿ ಘೋಷಣೆಯಾಗಿದ್ದರೆ, ಸಹಾಯಕ ಸಿಬ್ಬಂದಿಯ ಇತರ ಸದಸ್ಯರು ತಲಾ 20 ಲಕ್ಷ ರೂಪಾಯಿ ಪಡೆಯಬೇಕಿತ್ತು.
ಸೂತ್ರದ ಪ್ರಕಾರ ಆಟಗಾರರು ತಲಾ 30 ಲಕ್ಷ ರೂಪಾಯಿ ಪಡೆಯಬೇಕಿತ್ತು. ಆದರೆ ರಾಹುಲ್ ದ್ರಾವಿಡ್ ಅಂತಹ ವಿಭಜನೆಯನ್ನು ನಿರಾಕರಿಸಿದರು. ವಿತರಣಾ ಶೇಕಡಾವನ್ನು ಬದಲಾಯಿಸಲು ಮತ್ತು ಎಲ್ಲರಿಗೂ ಸಮಾನವಾಗಿ ಬಹುಮಾನ ನೀಡುವಂತೆ ಬಿಸಿಸಿಐಗೆ ಒತ್ತಾಯಿಸಿದರು.
ಆ ಬಳಿಕ ಬಿಸಿಸಿಐ ನಗದು ಬಹುಮಾನ ಮೊತ್ತದ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿತು. ಅದು ರಾಹುಲ್ ದ್ರಾವಿಡ್ ಸೇರಿದಂತೆ ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರು 25 ಲಕ್ಷ ರೂಪಾಯಿ ಗಳಿಸಿದರು.
ಸತತವಾಗಿ ರಾಹುಲ್ ದ್ರಾವಿಡ್ ತಮ್ಮ ನಿಸ್ವಾರ್ಥ ವ್ಯಕ್ತಿತ್ವಕ್ಕೆ ಪ್ರಶಂಸೆ ಗಳಿಸಿದ್ದಾರೆ. ತನ್ನ ಸಕ್ರಿಯ ಆಟದ ದಿನಗಳಲ್ಲಿ ಬ್ಯಾಟರ್ ಆಗಿದ್ದರೂ, ಅವರು ತಂಡದ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡಿದರು. ಇದೀಗ ತರಬೇತುದಾರನಾಗಿ ರಾಹುಲ್ ದ್ರಾವಿಡ್ ತಮ್ಮ ಜೊತೆ ಕೆಲಸ ಮಾಡುವ ಜನರ ಬೆಂಬಲಕ್ಕೆ ನಿಲ್ಲುವುದನ್ನು ಮುಂದುವರೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications